ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆರವರ ಜನ್ಮದಿನದ ಅಂಗವಾಗಿ ಎಐಎಮ್ಎಸ್ಎಸ್ ನಿಂದ ಕಾರ್ಯಕ್ರಮ.
ಧಾರವಾಡ : ‘ಅಕ್ಷರದವ್ವ, ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆ’ರವರ 195 ನೇ ಜನ್ಮ ದಿನದ ಅಂಗವಾಗಿ ಇಂದು ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ನಡುವೆ ಕಾರ್ಯಕ್ರಮ ಮಾಡಲಾಯಿತು. ಅದನ್ನು ಉದ್ದೇಶಿಸಿ ಎಐಎಮ್ಎಸ್ಎಸ್ ನ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್ ಮಾತನಾಡುತ್ತ ‘ಸುಮಾರು 200 ವರ್ಷಗಳ ಹಿಂದೆ ಮಹಿಳೆಯನ್ನು ಮನುಷ್ಯಳೆಂದೇ ಪರಿಗಣಿಸದ ಸಮಾಜದಲ್ಲಿ, ಒಬ್ಬ ಮಹಿಳೆಯಾಗಿ ಓದು ಬರಹ ಕಲಿತು, ಅದನ್ನೇ ಜ್ವಾಲೆಯಾಗಿ ಹಿಡಿದುಕೊಂಡು ಮುನ್ನಡೆದ ಧೀಮಂತ ಮಹಿಳೆ ಸಾವಿತ್ರಿಬಾಯಿ ಪುಲೆ.
ನಮಾನತೆಯ ಕಲ್ಪನೆ ಇನ್ನೂ ಸಮಾಜದಲ್ಲಿ ಸ್ಪಷ್ಟವಾಗಿ ಬೇರೂರುವ ಮೊದಲೇ ಶಿಕ್ಷಣದ ಮಹತ್ವ ಅರಿತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿಟ್ಟ ವ್ಯಕ್ತಿತ್ವ ಅವರದು ಜಾತಿ-ಲಿಂಗ ತಾರತಮ್ಯ, ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ದೌರ್ಜನ್ಯ, ಮಹಿಳಾ ಅನಕ್ಷರತೆಯಂತಹ ಹಲವು ಅಮಾನವೀಯ ಧೋರಣೆಗಳ ವಿರುದ್ಧ ಸಮರ ಸಾರಿ, ಲಿಂಗ ಸಮಾನತೆ, ದೀನ ದಲಿತರೂ ಕೂಡ ಮನುಷ್ಯರೇ ಎಂದು ಸಾವಿತ್ರಿಬಾಯಿ ಪುಲೆ ಪ್ರತಿಪಾದಿಸಿದರು ಎಂದರು.
ಮುಂದುವರೆದು ಮಾತನಾಡುತ್ತ – ಇಂದು ನಾವು ಸಾವಿತ್ರಿಬಾಯಿ ಪುಲೆಯವರನ್ನು ನೆನೆಯುವಾಗ ನಮ್ಮ ಇಂದಿನ ಸಂದರ್ಭದಕ್ಕೆ ಅವರ ವಿಚಾರಗಳ ಅವಶ್ಯಕತೆ ಹಾಗೂ ಪ್ರಸ್ತುತತೆಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಅಂದು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು. ಪರಿಣಾಮವಾಗಿ ಸಾಕಷ್ಟು ಜನ ವಿದ್ಯಾವಂತರಾಗಿದ್ದಾರೆ. ಆದರೆ ಇಂದಿಗೂ ಹೆಣ್ಣನ್ನು ನೋಡುವ ಮನೋಭಾವದಲ್ಲಿ ಮೂಲಭೂತ ವ್ಯತ್ಯಾಸವನ್ನು ಕಾಣುವುದಿಲ್ಲ.
ಮಹಿಳೆಯ ಮೇಲಿನ ದಬ್ಬಾಳಿಕೆ, ದೌರ್ಜನ್ಯ ಹೊಸ ರೂಪ ಪಡೆದುಕೊಂಡಿವೆ. ಒಂದೆಡೆ ಪುರುಷ ಪ್ರಧಾನ ಅಧೀನತೆ ಇನ್ನೊಂದೆಡೆ ಬಂಡವಾಳಶಾಹಿ ಆರ್ಥಿಕ ಶೋಷಣೆ. ಇದರ ಕುರಿತು ಹೆಣ್ಣು ಮಕ್ಕಳಲ್ಲಿ, ಜನನಾಮಾನ್ಯರಲ್ಲಿ ಪ್ರಜ್ಞೆ ಮೂಡಿಸಿ, ಅವರನ್ನು ಒಗ್ಗೂಡಿಸಿದಾಗ ಜನಚಳುವಳಿಗಳನ್ನು ಬೆಳೆಸಿದಾಗ ಮಾತ್ರ ಸಾವಿತ್ರಿ ಬಾಯಿ ಪುಲೆರವರಿಗೆ ಗೌರವ ಸಲ್ಲಿಸಿದಂತೆ, ಹೀಗೆ ಮಹಾನ್ ವ್ಯಕ್ತಿಗಳ ದಿನಗಳ ಆಚರಣೆ ಕೇವಲ ನಂಪ್ರದಾಯವಾಗದೇ, ಬದಲಾಗಿ ಅವರ ವಿಚಾರಧಾರೆ ನಮ್ಮ ಜೀವನಕ್ಕೆ ಸ್ಫೂರ್ತಿದಾಯಕ ಆದರ್ಶವಾಗಬೇಕುಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಎಮ್ಎಸ್ಎಸ್ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾದ ದೇವಮ್ಮ ದೇವತ್ಕಲ್,ಸದಸ್ಯರಾದ ಅನುಸೂಯ ಶಾನವಾಡ, ಗ್ರಾಮ ಘಟಕದ ಸದಸ್ಯರಾದ ಮುರಗಮ್ಮ ಗಾರಗದ, ವಿಜಯಲಕ್ಷ್ಮಿ ಹಿರೇಮಠ್, ಶಂಕ್ರಮ್ಮ ಮಲ್ಲಿಗವಾಡ ಭಾಗವಹಿಸಿದ್ದರು.





