ರೈಲ್ವೆ ದರ ಹೆಚ್ಚಳವನ್ನು ಖಂಡಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ದಾರವಾಡ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ.

Protest in front of Dharwad Railway Station by the Dharwad District Committee of the SUCI Communist Party, condemning the increase in railway fares.

ಧಾರವಾಡ 26 : ರೈಲ್ವೆ ದರ ಹೆಚ್ಚಳವನ್ನು ಖಂಡಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ದಾರವಾಡ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಮಾತನಾಡಿದರು. ಪ್ರತಿಭಟನೆ ಅಧ್ಯಕ್ಷತೆ ಗಂಗಾಧರ್ ಬಡಿಗೇರ್ ವಹಿಸಿದ್ದರು. ಈ ಸಂದರ್ಭದಲ್ಲಿ, ಎಂ ಬಿ ತಾಯಿದಾಸ್, ದೀಪಾ ಧಾರವಾಡ ಮಧುಲತಾ ಗೌಡರ, ದುರ್ಗಪ್ಪ, ಅಲ್ಲಾಭಕ್ಷ ಕಿತ್ತೂರ, ಶಿವಕುಮಾರ್ ಸೂರ್ಯವಂಶಿ ಮುಂತಾದವರು ಇದ್ದರು.

ರೈಲ್ವೆ ಯು ಜನಸಾಮಾನ್ಯರ ದುಡಿಯುವ ಜನಗಳ, ಮಧ್ಯಮ ವರ್ಗದವರ ಅತ್ಯಂತ ಹೆಚ್ಚು ಬಳಕೆಯಾಗುವ ಪ್ರಯಾಣದ ಸಾರಿಗೆಯಾಗಿದೆ. ದೇಶದ ಜನತೆಯ ತೆರಿಗೆ ಹಣದಿಂದ ನಿರ್ಮಿಸಿದ ಈ ಬೃಹತ್ ವಲಯವು ಲಾಭದ ಉದ್ದೇಶಕ್ಕಿಂತಲೂ ಹೆಚ್ಚು ಜನತೆಗೆ ಸೇವೆಯನ್ನು ಒದಗಿಸುವ ಸೇವಾ ವಲಯವಾಗಿದೆ.

ಆದರೆ ಸಿಬ್ಬಂದಿ ವೆಚ್ಚದ ಆರ್ಥಿಕ ಹೊರೆಯನ್ನು ಪೂರೈಸುವ ಕುಂಟು ನೆಪವೊಡ್ಡಿ, ಇಂದಿನಿಂದ ಜಾರಿಗೆ ಬರುವಂತೆ ಸಾಮಾನ್ಯ ವರ್ಗದಿಂದ ಎಸಿ ವರ್ಗದವರೆಗೆ ಎಲ್ಲಾ ಶ್ರೇಣಿಗಳ ರೈಲು ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಮತ್ತು ಅನಿಯಂತ್ರಿತವಾಗಿ ಹೆಚ್ಚಿಸಿದ ನೀತಿಯು ಅತ್ಯಂತ ಜನವಿರೋಧಿಯಾಗಿದೆ. ಇಂಥದೇ ಕ್ಷುಲ್ಲಕ ಕಾರಣ ನೀಡಿ ಈ ಹಿಂದೆಯೂ ಇದೇ ವರ್ಷ ರೈಲ್ವೆ ದರ ಏರಿಕೆ ಮಾಡಲಾಗಿತ್ತು. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲಗುತ್ತಿರುವ ಸಾಮಾನ್ಯ ಜನತೆಗೆ ಜೀವನ ನಿರ್ವಹಣೆಯೇ ಕಷ್ಟವಾಗಿರುವ ಸಂದರ್ಭದಲ್ಲಿ ಜನಸಾಮಾನ್ಯರ ಹೊರೆಯನ್ನು ಇಳಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಇನ್ನೊಂದೆಡೆ ರೈಲು ಪ್ರಯಾಣವು ಪ್ರಯಾಣಿಕರಿಗೆ ಇಂದಿಗೂ ಒಂದು ದುಸ್ವಪ್ನವಾಗಿಯೇ ಮುಂದುವರೆದಿದೆ. ರೈಲು ಅಪಘಾತಗಳು ಹೆಚ್ಚುತ್ತಿವೆ, ಸಮಯಪಾಲನೆಯು ಗತಕಾಲದ ನೆನಪಾಗಿದೆ, ರೈಲು ಬೋಗಿಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ, ಶೌಚಾಲಯದ ನೈರ್ಮಲ್ಯವು ಹದಗೆಟ್ಟಿದೆ, ಪ್ಲಾಟ್‌ಫಾರ್ಮ್‌ಗಳು ಕೊಳಕಾಗಿವೆ, ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ, ಆಹಾರ ದುಬಾರಿಯಾಗಿದ್ದರೂ ಗುಣಮಟ್ಟವು ಅತ್ಯಂತ ಕಳಪೆಯಾಗಿದೆ, ಭ್ರಷ್ಟಾಚಾರವು ತಾಂಡವವಾಡುತ್ತಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಯಾಣಿಕರ ಸುರಕ್ಷತೆಯು ಅಪಾಯದಲ್ಲಿದೆ. ಪ್ರಯಾಣಿಕರ ಅಗತ್ಯತೆಗಳ ಈ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಬದಲು, ಪದೇ ಪದೇ ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರನ್ನು ಹಿಂಡಿ ಹಿಪ್ಪೆ ಮಾಡುವುದು ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಮಾತ್ರ ಸರ್ಕಾರದ ಕಾಳಜಿಯಾಗಿದೆ. ಈ ಪ್ರಸ್ತಾವಿತ ದರ ಏರಿಕೆಯಿಂದ ಸರ್ಕಾರದ ಖಜಾನೆಗೆ ಸುಮಾರು 600 ಕೋಟಿ ರೂಪಾಯಿಗಳು ಹೆಚ್ಚುವರಿಯಾಗಿ ಹರಿದು ಬರಲಿದೆ, ಆದರೆ ಪ್ರಯಾಣಿಕರ ಕಷ್ಟಗಳು ಮಾತ್ರ ಅಬಾಧಿತವಾಗಿ ಮುಂದುವರಿಯಲಿವೆ.

ಪ್ರಯಾಣ ದರದ ಈ ಏರಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ಈ ದರ ಏರಿಕೆಯನ್ನು ಹಿಂಪಡೆಯುವುದು ಮಾತ್ರವಲ್ಲದೆ, ಅಸ್ತಿತ್ವದಲ್ಲಿರುವ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರ ಸುರಕ್ಷತೆ, ಸಮಯಪಾಲನೆ ಹಾಗೂ ಸೂಕ್ತ ಸೌಲಭ್ಯಗಳನ್ನು ಹೆಚ್ಚಿಸಬೇಕು ಮತ್ತು ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಪ್ರತಿಭಟನೆಯ ಮೂಲಕ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ SUCI(C)ಪಕ್ಷದ ಧಾರವಾಡ ಜಿಲ್ಲಾ ಸಮಿತಿಯು ಆಗ್ರಹಿಸುತ್ತೇವೆ.

ಬೇಡಿಕೆಗಳು :
ಇಂದಿನಿಂದ ಜಾರಿಗೆ ಬರುವಂತೆ ಸಾಮಾನ್ಯ ವರ್ಗದಿಂದ ಎಸಿ ವರ್ಗದವರೆಗೆ ಎಲ್ಲಾ ಶ್ರೇಣಿಗಳ ರೈಲು ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಮತ್ತು ಅನಿಯಂತ್ರಿತವಾಗಿ ಮಾಡಿದ ಟಿಕೆಟ್ ದರ ಏರಿಕೆಯನ್ನು ಕೂಡಲೇ ಹಿಂತೆಗೆದುಕೊಳ್ಳಿ.

ರೈಲು ಸುರಕ್ಷತೆ ಮತ್ತು ಸಮಯ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಿ, ಅಪಘಾತಗಳನ್ನು ತಡೆಗಟ್ಟಿ.

ಸಾಮಾನ್ಯ ಹಾಗೂ ಸ್ಲೀಪರ್ ಕೋಚ್, ಬೋಗಿಗಳನ್ನು ಹೆಚ್ಚಿಸಿ.

ರೈಲುಗಳಲ್ಲಿ ಶೌಚಾಲಯಗಳ ನೈರ್ಮಲ್ಯ ಮತ್ತು ಪ್ಲಾಟ್ ಫಾರ್ಮ್ ಗಳ ಸ್ವಚ್ಛತೆ, ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳ ನೈರ್ಮಲ್ಯ ಖಾತ್ರಿಪಡಿಸಿ.

ಹುಬ್ಬಳ್ಳಿ – ಬೆಂಗಳೂರು ಸಾಮಾನ್ಯ ಪ್ಯಾಸೆಂಜರ್ ರೈಲನ್ನು ಪುನರರಾಂಭಿಸಿ.

ರೈಲು ವಲಯವನ್ನು ಸಮರ್ಥವಾಗಿ ನಿರ್ವಹಿಸಲು ಅತ್ತ್ಯಗತ್ಯವಾದ ಸಿಬ್ಬಂದಿ ನೇಮಕ ಮಾಡಿ ಎಂದು ಮನವಿ ನೀಡಲಾಯಿತು.