ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ-2026 ಕ್ಕೆ ಸಂಬಂಧಿಸಿದಂತೆ, ನವೆಂಬರ್ 25, 2025 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 10, 2025 ರವರೆಗೆ ಕಾಲಾವಕಾಶ ಇದೆ ಎಂದು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ 13,917 ಪುರುಷರು, 10,852 ಮಹಿಳೆಯರು ಸೇರಿ ಒಟ್ಟು 24,769 ಮತದರರಿದ್ದಾರೆ.
ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ಅಂತರ್ಜಾಲ ceo.karnataka.gov.in ನಲ್ಲಿ, ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ನೋಂದಾಣಿಧಿಕಾರಿಗಳು ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧಿಕೃತ ಅಂತರ್ಜಾಲ rcbelagavi.karnataka.gov.in ನಲ್ಲಿ ಹಾಗೂ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಧಿಕಾರಿಗಳವರ ಅಧಿಕೃತ ಅಂತರ್ಜಾಲ www.dharwad.nic.in ದಲ್ಲಿ ಪ್ರಕಟಿಸಲಾಗಿದೆ.
ಸದರಿ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಾಗಿ ಡಿಸೆಂಬರ್ 10, 2025 ರವರೆಗೆ ಕಾಲಾವಕಾಶವಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು, ಅರ್ಹ ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಗೊತ್ತುಪಡಿಸಿದ ಅಧಿಕಾರಿಗಳಿಗೆ, ತಹಶೀಲ್ದಾರ ಕಚೇರಿ ಅಥವಾ ಮಹಾನಗರ ಪಾಲಿಕೆಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.