26 ಕ್ಕೆ ಅಖಿಲ ಭಾರತ ವಿದ್ಯುತ್‌ ಬಳಕೆದಾರರ ಸಂಘ ದಕ್ಷಿಣ ಭಾರತ ವಲಯ ಸಮಾವೇಶ .

ಧಾರವಾಡ 14 : ಬಳಕೆದಾರರ ಸಂಘ (AIECA) ದೇಶದಾದ್ಯಂತ ಗ್ರಾಹಕರ ಆಂದೋಲನವನ್ನು ಬೆಳೆಸುತ್ತಿದೆ. ಅದರ ಭಾಗವಾಗಿ ದೇಶದ 4 ಭಾಗಗಳಲ್ಲಿ ವಲಯವಾರು ಸಮಾವೇಶವನ್ನು ಸಂಘಟಿಸುತ್ತಿದ್ದು, ಅದರ ಭಾಗವಾಗಿ ದಕ್ಷಿಣ ಭಾರತ ವಲಯ ಸಮಾವೇಶವನ್ನು ಅಕ್ಟೋಬರ್ 26, 2025 ರಂದು ಕರ್ನಾಟಕದ ಬೆಂಗಳೂರಿನ ಕುಮಾರ ಪಾಕ೯ ಈಸ್ಟ ಗಾಂಧಿ ಭವನದಲ್ಲಿ ಬೆಳಿಗ್ಗೆ 10 : 30 ಕ್ಕೆ ಸಂಘಟಿಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘ ರಾಜ್ಯ ಕಾರ್ಯದರ್ಶಿಗಳು ಜ್ಞಾನಮೂರ್ತಿ ತಿಳಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತನ್ಮೂಲಕ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ವಿರುದ್ಧ ಹೋರಾಟವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ 400 ಕ್ಕೂ ಅಧಿಕ ಬುದ್ಧಿಜೀವಿಗಳು, ಗ್ರಾಹಕರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಈ ಸಮಾವೇಶವನ್ನು ಸ್ವಪನ್ ಘೋಷ್, ಅಧ್ಯಕ್ಷರು, ಆಲ್ ಇಂಡಿಯಾ ಎಲೆಕ್ಸಿಸಿಟಿ ಕಂಜೂಮರ್ಸ್ ಅಸೋಸಿಯೇಷನ್ ಉದ್ಘಾಟಿಸಲಿದ್ದಾರೆ ಎಂದರು. ಅಲ್ಲದೆ ಅತಿಥಿ ಭಾಷಣಕಾರರಾಗಿ ಎಂ.ಜಿ. ದೇವಸಹಾಯಂ, ಮಾಜಿ ಐಎಎಸ್ ಅಧಿಕಾರಿ ಹರಿಯಾಣ ವಿದ್ಯುತ್ ಮಂಡಳಿಯ ಮಾಜಿ ಅಧ್ಯಕ್ಷರು, ಲೇಖಕರು, ವಡ್ಡೆ ಸೋಭನಾದ್ರಿಶ್ವರ ರಾವ್, ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕರು, ಅಖಿಲ ಭಾರತ ವಿದ್ಯುತ್‌ ಆಂಧ್ರಪ್ರದೇಶ, ಮಾಜಿ ಸಂಸದರು, ಮಾಜಿ ಕೃಷಿ ಸಚಿವರು, ಎಸ್. ಗಾಂಧಿ, ಸಲಹೆಗಾರ AIECA, ಅಧ್ಯಕ್ಷರು, ತಮಿಳುನಾಡು ಪವರ್ ಎಂಜಿನಿಯರ್ಸ್ ಸೊಸೈಟಿ, ಬಿ. ದಿಲೀಪನ್, ರಾಜ್ಯ ಉಪಾಧ್ಯಕ್ಷರು, ಜನಕೀಯ ಪ್ರತಿರೋಧ ಸಮಿತಿ (JPS), ಕೇರಳ ಮುಂತಾದವರು ಭಾಗವಹಿಸಲಿದ್ದಾರೆ.

ಸಮರ್ ಸಿನ್ಹಾ, ಕಾರ್ಯಾಧ್ಯಕ್ಷರು, ಕೆ. ಸೋಮಶೇಖರ್, ಉಪಾಧ್ಯಕ್ಷರು, AIECA, ಅಜಯ್ ಚಟರ್ಜಿ, ಖಜಾಂಚಿ, AIECA, ಶ್ರೀಮತಿ ದೀಪಾ, ರಾಜ್ಯ ಕಾರ್ಯಕಾರಿ ಸದಸ್ಯೆ, AIKKMS, ಕರ್ನಾಟಕ ಭಾಷಣಕಾರರಾಗಿ ಆಗಮಿಸಲಿದ್ದು, ಕೆ. ವೇಣುಗೋಪಾಲ್ ಭಟ್, ಪ್ರಧಾನ ಕಾರ್ಯದರ್ಶಿ, AIECA ಸಮಾವೇಶದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಜ್ಞಾನಮೂರ್ತಿ, ಸುಬ್ಬಾರೆಡ್ಡಿ, ಸುರೇಂದ್ರನ್, ಅನವರತನ್, ಶಿವಕುಮಾರ್, ಹೆಚ್.ಪಿ ಶಿವಪ್ರಕಾಶ ಮುಂತಾದವರು ಮತ್ತು ದಕ್ಷಿಣ ಭಾರತದ ವಿವಿಧ ರಾಜ್ಯ ಸಂಘಟನಾಕಾರರು ಉಪಸ್ಥಿತರಿರುವರುಎಂದು ತಿಳಸಿದರು. ವಿದ್ಯುತ್‌ ಜನರ ಹಕ್ಕು – ಅದು ಅತ್ಯಗತ್ಯ ಸೇವೆ. ಅದನ್ನು ಲಾಭಕೋರರ ವ್ಯಾಪಾರದ ಸರಕಾಗಲು ಬಿಡಬಾರದು.

ದೇಶ ಸ್ವತಂತ್ರಗೊಂಡ ತರುವಾಯದಲ್ಲಿ ವಿದ್ಯುತ್‌ ಅನ್ನು ಉತ್ಪಾದಿಸಿ, ಲಾಭ ಮತ್ತು ನಷ್ಟ ನೋಡದೇ ಅದನ್ನು ಕಟ್ಟಕಡೆಯ ಗ್ರಾಹಕರಿಗೂ ಲಭಿಸುವಂತೆ ಕನಿಷ್ಠ ದರದಲ್ಲಿ ಒದಗಿಸುವುದು ಸರ್ಕಾರಗಳ ಬಾದ್ಯತೆಯಾಗಿತ್ತು. ಆದರೆ 90 ರ ದಶಕದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಾಗತೀಕರಣ ಮತ್ತು ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಮೇಲೆ ಈ ಧೋರಣೆಯು ಬದಲಾಯಿತು. 2003 ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಕಾಯಿದೆಗೆ ತಿದ್ದುಪಡಿ ತರುವುದರ ಮೂಲಕ ಖಾಸಗಿ ಕಂಪನಿಗಳಿಗೆ ದೇಶದಲ್ಲೇ ಮೊಟ್ಟ ಮೊದಲ ಬಾರಿ ಅವಕಾಶ ಮಾಡಿ ಕೊಡಲಾಯಿತು. ಶೇಕಡಾ 50 ಕ್ಕೂ ಹೆಚ್ಚು ವಿದ್ಯುತ್ ಉತ್ಪಾದನೆ ಈಗ ಖಾಸಗಿಯವರ ಹಿಡಿತದಲ್ಲಿದೆ. ಇತ್ತೀಚೆಗೆ ವಿದ್ಯುತ್‌ಚ್ಯಕ್ತಿ ಮಸೂದೆ 2022 ಮೂಲಕ ಹೊಸ ತಿದ್ದುಪಡಿ ಮಾಡಿ ಜನರ ವಿರೋಧದ ನಡುವೆಯೂ ಸಂಸತ್ತಿನಲ್ಲಿ ತರಾತುರಿಯಲ್ಲಿ ಮಂಡಿಸಿ ಕಾಯ್ದೆ ತರಲು ಯತ್ನಿಸಿ, ಸರಬರಾಜನ್ನು ಸಹ ಖಾಸಗಿ ಕಂಪನಿಗಳ ಕೈಗೆ ಒಪ್ಪಿಸಲು ಕೇಂದ್ರ ಸರ್ಕಾರ ಹೊರಟ್ಟಿದ್ದು ನಮಗೆ ತಿಳಿದಿದೆ.

ಈ ನೀತಿಗೆ ಎಲ್ಲಾ ರಾಜ್ಯ ಸರ್ಕಾರಗಳ ಸಹಮತವೂ ಇದೆ. ಚಂಡಿಘಡ ಹಾಗೂ ಮದುಚೆರಿಯಲ್ಲಿ ಕಾಯ್ದೆಯಿಲ್ಲದಿದ್ದರೂ ಆಡಳಿತ ಕ್ರಮದ ಮೂಲಕ ಜಾರಿಗೆ ತರಲಾಗಿದೆ. ದಕ್ಷಿಣ ರಾಜ್ಯಗಳು ಇದಕ್ಕೆ ಹೊರತಾಗಿರದೆ ಹಿಂಬಾಗಿಲ ಮೂಲಕ ಈ ಕ್ರಮಗಳನ್ನು ಜಾರಿಗೆ ತರಲು ಹವಣಿಸುತ್ತಿವೆ. ಅದರ ಭಾಗವಾಗಿಯೇ ಸ್ಮಾರ್ಟ್ ಮೀಟರ್, ಪ್ರಿ ಪೈಡ್ ಮೀಟರ್ ಮತ್ತು ಟಿಓಡಿ ಎಂಬ ಹೊಸ ಕ್ರಮಗಳನ್ನು ಜಾರಿಗೆ ತರಲು ಹೊರಟಿದ್ದಾರೆ.

ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು, ಜನರ ತೀವ್ರ ಪ್ರತಿಭಟನೆಗಳಿಂದಾಗಿ ಸ್ಮಾರ್ಟ್ ಮೀಟರ್ ಅಳವಡಿಸುವ ಯತ್ನದಿಂದ ಹಿಮ್ಮೆಟ್ಟಬೇಕಾಯಿತು. ಉತ್ತರಪ್ರದೇಶ, ಕಾಶ್ಮೀರ, ಪುದುಚೆರಿ, ಮಹರಾಷ್ಟ್ರ, ಪಂಜಾಬ್, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಸ್ವತಃ ನೌಕರರು ಬೀದಿಗಿಳಿದು ಈ ಖಾಸಗೀಕರಣ ಕ್ರಮದ ವಿರುದ್ಧ ಬೃಹತ್ ಹೋರಾಟವನ್ನು ಬೆಳೆಸುತ್ತಿರುವುದು ಆಶಾದಾಯಕ ವಿಷಯವಾಗಿದೆ ಎಂದರು.

ನಮ್ಮ ರಾಜ್ಯದಲ್ಲಿ ಸಹ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಕೆಗೆ, ವಾಣಿಜ್ಯ ದರ ಏರಿಕೆ, ಫಿಕ್ಸ್ ದರ ಏರಿಕೆ ಕ್ರಮಕ್ಕೆ ಮುಂದಾಗಿದೆ. ಅಲ್ಲದೇ ನೌಕರರಿಗೆ ಗ್ರಾಚ್ಯಟಿ ಕೊಡಬೇಕಾದ ತನ್ನ ಜವಬ್ದಾರಿಯಿಂದ ನುಣುಚಿಕೊಂಡು ಅದನ್ನು ಪ್ರತಿ ಯೂನಿಟ್‌ಗೆ ರೂ 36 ಪೈಸೆ ದರ ವಿಧಿಸುವ ಮೂಲಕ ಗ್ರಾಹಕರ ಹೆಗಲಿಗೆ ವರ್ಗಾಯಿಸಿ ಇನ್ನಷ್ಟು ಅವರ ಹೊರೆಯನ್ನು ಹೆಚ್ಚಿಸಿದೆ. ಸ್ಮಾರ್ಟ್ ಮೀಟರ್ ಅಳವಡಿಸಿರುವ ಕಡೆಗಳಲ್ಲಿ ಬಳಕೆಯಲ್ಲಿ ಏನೂ ವ್ಯತ್ಯಾಸವಿರದಿದ್ದರೂ ವಿದ್ಯುತ್‌ ಬಿಲ್ ಹೆಚ್ಚಾಗಿದೆಯೆಂದು ತಿಳಿದು ಬಂದಿದೆ.

ಅಂತೆಯೇ ಅಲ್ಲೆಲ್ಲಾ ಪ್ರತಿಭಟನೆಗಳು ನಡೆಯುತ್ತಿವೆ. ಮೊದಲು ವಿದ್ಯುತ್‌ ಬಳಸಿ ನಂತರ ಹಣ ಪಾವತಿಸಲಾಗುತ್ತಿತ್ತು; ಈಗ ಮೊದಲು ಹಣ ಕಟ್ಟಿದ ಮೇಲೆ ವಿದ್ಯುತ್ ದೊರೆಯುತ್ತದೆ.ಈ ಯೋಜನೆಯಿಂದ ಕ್ರಾಸ್ ಸಬ್ಸಿಡಿ ತೆಗೆದುಹಾಕಿ, ಈಗಾಗಲೇ ಅದನ್ನು ಫಲಾನುಭವಿಗಳಿಗೆ ನೇರ ವರ್ಗಾವಣೆ (DBT) ಮೂಲಕ ನೀಡುವರಂತೆ ಎಲ್‌ಪಿಜಿ ಅಡುಗೆ ಅನಿಲಕ್ಕೆ ಸಬ್ಸಿಡಿ ಕೊಡುವುದಾಗಿ ನಂಬಿಸಿ ಪಂಗನಾಮ ಹಾಕಿದ್ದನ್ನು ಮರೆಯಲಾದೀತೆ? ಅಂತೆಯೇ ಸ್ಮಾರ್ಟ್ ಮೀಟರ್‌ಗಾಗಿ ಡಿಪೋಸಿಟ್ ಹಣ, ನಿರ್ವಹಣೆ, ಸೇವೆ ಇತ್ಯಾದಿ ಹೆಚ್ಚಿನ ಹಣಕಾಸಿನ ಹೊರೆ ಗ್ರಾಹಕರಿಗೆ ತಗಲುವುದರಿಂದ, ಪ್ರೀಪೇಯ್ಡ್ ಹಣ ಮುಗಿದ ತಕ್ಷಣ ವಿದ್ಯುತ್ ಕಡಿತವಾಗುವುದರಿಂದ, ಗ್ರಾಹಕರ ಒಪ್ಪಿಗೆಯಿಲ್ಲದೆ ಅಳವಡಿಸುವುದರಿಂದ, ಗ್ರಾಹಕರ ಮಾಹಿತಿಯ ದುರುಪಯೋಗ ಸಾಧ್ಯತೆಯಿರುವ ಎಲ್ಲಾ ಕಾರಣಗಳಿಂದ ನಾವು ಈ ಸ್ಮಾರ್ಟ್ ಮೀಟರ್ ಅಳವಡಿಕೆ ವಿರೋಧಿಸಬೇಕಿದೆ.ಇದರ ಜೊತೆಗೆ ಸರ್ಕಾರಗಳು ದಿನದ ಸಮಯದ ಪ್ರಕಾರ (TOD) ದರವನ್ನು ಕೂಡ ಜಾರಿಗೊಳಿಸುತ್ತಿವೆ. ಹಗಲು ಹೊತ್ತಿನ ನಂತರದ ಪೀಕ್ ಅವಧಿಯಲ್ಲಿ ದರ 10-20% ಹೆಚ್ಚಾಗುತ್ತದೆ. ಈ ಅನ್ಯಾಯದ ದರ ಹೆಚ್ಚಳದಿಂದ ಬಡವರ ಮೇಲೆ ಮತ್ತಷ್ಟು ಹೆಚ್ಚಿನ ಹೊರೆ ಬೀಳುತ್ತದೆ.

ಆದ್ದರಿಂದ, ಈ ದಕ್ಷಿಣ ಭಾರತ ವಲಯ ವಿದ್ಯುತ್ ಬಳಕೆದಾರರ ಸಮಾವೇಶವನ್ನು ನಡೆಸುವ ಅತಿಥೇಯ ರಾಜ್ಯವಾಗಿ ಇದನ್ನು ಯಶಸ್ವಿಗೊಳಿಸಲು ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಕರು, ಸಣ್ಣ ವ್ಯಾಪಾರಿಗಳು, ಹಿರಿಯ ನಾಗರಿಕರು ಇತ್ಯಾದಿ ಎಲ್ಲಾ ಪ್ರಜ್ಞಾವಂತ ಜನರು ಎಲ್ಲಾ ರೀತಿಯ ಸಹಾಯAIECA ಗೆ ಸಂಯೋಜಿತವಾದ ಕರ್ನಾಟಕ ವಿದ್ಯುತ್ ಸಹಕಾರ ನೀಡಲು ಮುಂದೆ ಬರಬೇಕೆಂದು ಬಳಕೆದಾರರ ಸಂಘವು ಮನವಿ ಮಾಡುತ್ತದೆ ಎಂದು ತಿಳಸಿದರು ಪತ್ರಿಕಾಗೋಷ್ಟಿಯಲ್ಲಿ ಶರಣು ಗೋನವರ,ದೀಪಾ ಧಾರವಾಡ ಇದ್ದರು.