17 ಕ್ಕೆ ರಾಜ್ಯ ಮಟ್ಟದ ಉದ್ಯೋಗಾಕಾಂಕ್ಷಿಗಳ ಆಗ್ರಹ ಸಮಾವೇಶ.

ಧಾರವಾಡ  : ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಕರ್ನಾಟಕದ ವತಿಯಿಂದ 17 ಅಕ್ಟೋಬರ್ 2025 ಬೆಳಿಗ್ಗೆ 10.30 ಧಾರವಾಡದ ಕ.ವಿ.ವ. ಸಂಘದ ನಾಡೋಜ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ರಾಜ್ಯ ಮಟ್ಟದ ಉದ್ಯೋಗಾಕಾಂಕ್ಷಿಗಳ ಆಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕದ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್‌ ತಿಳಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅತಿಥಿಗಳಾಗಿ ಮಾಜಿ ಲೋಕಾಯುಕ್ತರು, ಕರ್ನಾಟಕ ಹಾಗೂ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಸಂತೋಷ್ ಹೆಗಡೆ ಮತ್ತು ಹಿರಿಯ ಸಾಮಾಜಿಕ ಹೋರಾಟಗಾರರು ಹಾಗೂ ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷರಾದ ಎಸ್. ಆರ್. ಹಿರೇಮಠ ಆಗಮಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಯುವಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಉದ್ಯೋಗ ಪಡೆಯಲು ಅವಿರತ ಅಧ್ಯಯನ, ಪರಿಶ್ರಮ ನಡೆಸಿದರೂ ಸಹ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆಯದೇ ಬೇಸತ್ತಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡು ಸಿನಿಕತೆಗೆ ಬಲಿಯಾಗುತ್ತಿದ್ದಾರೆ ಎಂದರು.

ನಮ್ಮ ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ, ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದರೂ ಸಹ ಒಳ ಮೀಸಲಾತಿ ನಿರ್ಧಾರದ ಹೆಸರಿನಲ್ಲಿ ಯಾವುದೇ ನೇಮಕಾತಿಯನ್ನು ಮಾಡಿಲ್ಲ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನತೆ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ ಎಂದರು. 2025-26ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತೂ ಪ್ರಯತ್ನಗಳು ನಡೆಯುತ್ತಿಲ್ಲ.

ಒಂದಿಲ್ಲೊಂದು ನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ರಾಜ್ಯದ ಎಲ್ಲೆಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದು ಎಂದು ಹಲವಾರು ವರ್ಷಗಳಿಂದ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. 4-5 ವರ್ಷಗಳಿಂದ ನೇಮಕಾತಿಗಳೇ ನಡೆಯದಿರುವುದರಿಂದ ಅದೆಷ್ಟೋ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರಕ್ಕೆ ಮೊರೆಹೋಗುತ್ತಿದ್ದಾರೆ ಎಂದರು.

ಇನ್ನೊಂದೆಡೆ ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರ ಒಳಜಗಳ ಮತ್ತು ಅದರಲ್ಲಿನ ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಹುದ್ದೆಗಳು ಖಾಲಿ ಬಿದ್ದಿವೆ. ಮತ್ತೊಂದೆಡೆ ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರಿಗೆ ಸಿಗಬೇಕಾದ ಸೇವೆಗಳು ಸರಿಯಾಗಿ ತಲುಪುತ್ತಿಲ್ಲ. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಪುಡಿಗಾಸಿಗೆ, ಉದ್ಯೋಗ ಭದ್ರತೆ ನೀಡದೇ ದುಡಿಸಿಕೊಳ್ಳಲಾಗುತ್ತಿದೆ.

ಇನ್ನೊಂದೆಡೆ, ಕಳೆದ ಹಲವಾರು ವರ್ಷಗಳಿಂದಲೂ ನೇಮಕಾತಿ ಇಲ್ಲದಿದ್ದರೂ ಜಾತಕ ಪಕ್ಷಿಯಂತೆ ನೇಮಕಾತಿಗಾಗಿ ಕಾಯುತ್ತಾ, ಸಾವಿರಾರು ರೂಪಾಯಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಹಾಗೂ ಗ್ರಂಥಾಲಯಗಳಲ್ಲಿ ಓದಲು ಉದ್ಯೋಗಾಕಾಂಕ್ಷಿಗಳು ಖರ್ಚು ಮಾಡಿಕೊಂಡಿದ್ದಾರೆ. ಹಗಲಿರುಳು ಕೂಲಿ-ನಾಲಿ ಮಾಡಿ, ಸಾಲ ಮಾಡಿ ಪೋಷಕರು ಮಕ್ಕಳಿಗೆ ತರಬೇತಿ ಕೊಡಿಸುತ್ತಿದ್ದಾರೆ.

ಇಷ್ಟೆಲ್ಲಾ ಗಂಭೀರ ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದರೂ ಸಹ ಸರ್ಕಾರಗಳು ಈ ಬಗ್ಗೆ ಎಳ್ಳಷ್ಟೂ ಸ್ಪಂದಿಸುತ್ತಿಲ್ಲ. ಈಗಲಾದರೂ ಸರ್ಕಾರಗಳು ಯಾವುದೇ ನೆಪಗಳನ್ನು ಹೇಳದೆ, ಕೆಲವೇ ಹುದ್ದೆಗಳ ಭರ್ತಿಗೆ ಸೀಮಿತಗೊಳಿಸದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಗಟ್ಟಿ, ಪಾರದರ್ಶಕತೆಯನ್ನು ತರುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು, ನಾಲೈದು ವರ್ಷಗಳಿಂದ ನೇಮಕಾತಿಗಳು ನಡೆಯದ ಕಾರಣ ಅರ್ಹತಾ ವಯೋಮಿತಿಯಲ್ಲಿಯೂ ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು ಎಂದರು.

ಇಂತಹ ಪರಿಸ್ಥಿತಿಯಲ್ಲಿ ಇತ್ತೀಚಿಗೆ ಕೆ.ಇ.ಎ, ಮೂಲಕ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ದುಬಾರಿ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಅದನ್ನು ಕೂಡಲೇ ಕೈಬಿಡಬೇಕು. ಈ ಕೆಳಗಿನ ಹಕ್ಕೊತ್ತಾಯಗಳನ್ನು ಯಾವುದೇ ವಿಳಂಬವಿಲ್ಲದೆ ಪರಿಹರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಕರ್ನಾಟಕದ ವತಿಯಿಂದ ಈ ರಾಜ್ಯ ಮಟ್ಟದ ಉದ್ಯೋಗಾಕಾಂಕ್ಷಿಗಳ ಆಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.