
ಕೃಷಿಕರು, ಪುರೋಹಿತರಿಗೆ ಕನ್ಯಾದಾನ ಮಾಡಿರಿ: ಕಣ್ವ ತೀರ್ಥರ ಕರೆ
ಧಾರವಾಡ: ಯುವ ಬ್ರಾಹ್ಮಣ ಕೃಷಿಕರು, ಪಂಡಿತರು, ಪುರೋಹಿತರಿಗೆ ಕನ್ಯಾಪಿತೃಗಳು ಕನ್ಯಾದಾನ ಮಾಡಿ ಬ್ರಾಹ್ಮಣ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಹುಣಸಿಹೊಳೆ ಕಣ್ವಮಠದ ಶ್ರೀಮದ್ ವಿದ್ಯಾ ಕಣ್ವ ವಿರಾಜ ತೀರ್ಥ ಸ್ವಾಮೀಜಿ ಇಂದಿಲ್ಲಿ ಕರೆ ನೀಡಿದರು.
ಇಲ್ಲಿಯ ಶ್ರೀ ಶಂಕರಾಚಾರ್ಯ ಮಠದಲ್ಲಿ ಶುಕ್ಲಯಜುರ್ವೇದಿಯರ ರಾಜ್ಯ ಮಟ್ಟದ ವಿಪ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಯುವಜನರ ಮದುವೆ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಬರೀ ವೈದ್ಯರು, ಇಂಜಿನೀಯರುಗಳಷ್ಟೇ ಸಮಾಜದಲ್ಲಿ ಇಲ್ಲ. ಉತ್ತಮ ನಡತೆಯ ಕೃಷಿಕರು, ಪಂಡಿತರು, ವಕೀಲರು, ಖಾಸಗಿ ಉದ್ಯೋಗ ಮಾಡುವ ಅನೇಕ ಬ್ರಾಹ್ಮಣ ಯುವಜನರಿದ್ದಾರೆ. ಬ್ರಾಹ್ಮಣ ಕನ್ಯೆಗಳು ಮತ್ತು ಪಾಲಕರು ಅವರನ್ನು ತಿರಸ್ಕರಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
ಬ್ರಾಹ್ಮಣರಲ್ಲಿ ಅನೇಕ ಪಂಗಡಗಳಿದ್ದರೂ ಅವರಿಗೆಲ್ಲ ವೇದವೇ ಮೂಲ. ಅಕ್ಷಂತಿಗೂ, ಭಸ್ಮಕ್ಕೂ ಯಾವುದೇ ಬೇಧವಿಲ್ಲ. ಇದನ್ನು ಅರಿತು ಎಲ್ಲರೂ ವರ ಕನ್ಯೆಯರ ಸಂಬಂಧ ಬೆಳೆಸಲು ಮುಂದಾಗಬೇಕೆಂದರು.
ಕಾರ್ಯಕ್ರಮ ದಲ್ಲಿ ಬ್ರಾಹ್ಮಣ ಕೃಷಿಕರನ್ನು ಸನ್ಮಾನ ಮಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು ಕೃಷಿಕರು, ಪಂಡಿತರು, ವಕೀಲರು, ಅಧ್ಯಾಪಕರು, ಖಾದಗಿ ಉದ್ಯೋಗ ಮಾಡುವವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ಪಾಲಕರಿಗೆ ಮುಂದಿನ ಸಮ್ಮೇಳನದಲ್ಲಿ ಸನ್ಮಾನ ಮಾಡಬೇಕೆಂದು ಸಂಘಟಕರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಕೃಷಿಕರನ್ನು, ಸಾಧಕರನ್ನು ಸತ್ಕರಿಸಲಾಯಿತು.
ಗುರ್ಲಹೊಸೂರಿನ ದಂಡಪಾಣಿ ದೀಕ್ಷಿತರು ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮೀಕಾಂತ, ಎಸ್. ಗೋಪಿನಾಥ ಮಾತನಾಡಿದರು. ಪ್ರಮೋದ ತಮ್ಮಣ್ಣವರ, ದುಷ್ಯಂತ ನಾಡಗೌಡ, ಆರ್.ಕೆ. ಮುಳಗುಂದ, ಜಿ.ಕೆ.ಕುಲಕರ್ಣಿ, ಶಂಕರಭಟ್ಟ ಜೋಶಿ, ಶ್ರೀಕೃಷ್ಣ ಸಂಪಗಾಂವಕರ, ಮೋಹನ ದೀಕ್ಷಿತರು, ನೀಲಕಂಠ ದೀಕ್ಷಿತರು, ಹನುಮಂತ ಟಕ್ಕಳಕಿ, ದತ್ತಪಯ್ಯ ಸ್ವಾಮೀಜಿ, ವೆಂಕಣ್ಣ ಜೋಶಿ, ನಟೇಶ ಸ್ವಾಮೀಜಿ, ಚಿದಂಬರ ದೀಕ್ಷಿತ, ಅರವಿಂದ ಪೂಜಾರ, ಎಂಜಿ ದೇಶಪಾಂಡೆ, ಶಂಕರ ಪಾಟೀಲ, ಅನಂತ ಕುಲಕರ್ಣಿ, ವೆಂಕಟೇಶ ಶಿವಪೂಜಿ ಮೊದಲಾದವರಿದ್ದರು.
ವೇದಘೋಷ ನಂತರ ಮದಿಹಾಳದ ಕಾತ್ಯಾಯಿನಿ ಮಹಿಳಾ ಮಂಡಳದವರು ಪ್ರಾರ್ಥನೆ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಿ.ಆರ್.ಜೋಶಿ ಸ್ವಾಗತಿಸಿದರು. ಸಂಚಾಲಕ ನರಸಿಂಹ ಸೋಮಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನ ಸಂಘಟನೆಯ ಹಿನ್ನೆಲೆ, ಸಿದ್ಧತೆ ವಿವರಿಸಿದರು
ಡಾ. ಜಿ.ಎಂ.ಪಾಟೀಲ ನಿರೂಪಿಸಿದರು. ಸತ್ಯನಾರಾಯಣಾಚಾರ್ಯ ವಂದಿಸಿದರು.