
ಅನ್ವೇಷಣೆ ಕೂಟ ಸಜ್ಜನ ಸಾಹಿತಿ, ಸಂಘಟಕ ದಿವಂಗತ ಡಾ|| ವರದರಾಜ ಹುಯಿಲಗೋಳರ 33 ನೇ ಪುಣ್ಯ ಸ್ಮರಣೆ
ಧಾರವಾಡ: ಕೃಷ್ಣಾಬಾಯಿ ಕಲ್ಲೂಪಂತ ದಂಪತಿಗಳ ಮೂವರು ಹೆಣ್ಣುಮಕ್ಕಳು ಗಂಗಾ, ತುಂಗಾ ಮತ್ತು ನರ್ಮದಾ. ಒಂದಕ್ಕೊಂದು ಛಂದದ ಈ ಮೂವರು ಹುಡುಗಿಯರ ಧ್ವನಿಗಳೂ ಕೂಡ ಅತ್ಯಂತ ಮಧುರವಾಗಿದ್ದವು. ಇವರಿಗೆ ಸಂಗೀತ ಕಲಿಸಿರಿ. ಛೋಲೋ ಗುರುವಿನ ಕೈಯಾಂಥಾ ಶಿಷ್ಯಂದರು ಸಿಕ್ಕರೆ ಗುರುವಿಗೂ ಸ್ವರ್ಗ ಸಿಕ್ಕಷ್ಟಽ ಖುಶೀನೂ ಆಗ್ತದ. ಹೀಗೆ ಕಥೆ ಸರಾಗವಾಗಿ ಮುಂದುವರೀತಾನೇ ಹೋಗ್ತದೆ. ಇತಿಹಾಸ, ಪುರಾಣ, ವಾಸ್ತವಗಳೆಲ್ಲವನ್ನೂ ಹದವಾಗಿ ಸೇರಿಸಿ ಸುಂದರವಾಗಿ ಹೆಣೆಯತ್ತ ಹೋಗುವ ಹಿರಿಯ ಕಥೆಗಾರ ರಾಘವೇಂದ್ರ ಪಾಟೀಲರ ಮೂವರು ಹಾಡುಗಾರ್ತಿ ಹುಡುಗಿಯರ ಅಂದರೆ ಈ ಮೂವರು ಮಾಯಿಯರ ಸಂಗೀತ ಕಲಿಕೆಯ ಈ ಕಥೆ ಕಾಲ್ಪನಿಕವೂ ಅಲ್ಲದ, ರಮ್ಯವೂ ಅಲ್ಲದ ವಾಸ್ತವತೆಯ ಸುತ್ತ ಹಬ್ಬುತ್ತ ಹೋಗುವ ಅಪರೂಪದ ಕೃತಿಯಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ಮಹತ್ವದ ಕಥೆಯಾಗಿ ಹೊರಹೊಮ್ಮಿದೆ.
ಒಟ್ಟಿನಲ್ಲಿ ಇಲ್ಲಿ ಜೀವನವನ್ನು ಶೋಧನೆ ಮಾಡುವದು ರಾಘವೇಂದ್ರ ಪಾಟೀಲರ ಪ್ರಯತ್ನವಾಗಿದ್ದು ಸ್ವಾರಸ್ಯಕರ ನಿರೂಪಣೆ, ಉತ್ತರ ಕರ್ನಾಟಕದ ಆಡುಭಾಷೆಯ ಸೊಗಡು, ಸವಿ, ಕಣ್ಣಿಗೆ ಕಟ್ಟುವಂಥ ಚಿತ್ರಕ ಶಕ್ತಿಗಳಿಂದಾಗಿ “ಮಾಯಿಯ ಮುಖಗಳು” ಎಂಬ ಶೀರ್ಷಿಕೆಯ ಈ ಕಥಾಗುಚ್ಛದ “ಮಾಯಿಯ ಮುಖಗಳು” ಎನ್ನುವ ಮೊದಲ ಕಥೆಯೇ ಓದುಗನನ್ನು ತೀವ್ರವಾಗಿ ಸೆರೆಹಿಡಿದು ಬಿಡುತ್ತದೆ ಎಂದು ಹಿರಿಯ ಸಾಹಿತಿ, ವಿಮರ್ಶಕ, ಚಿಂತಕ ಡಾ|| ಶ್ಯಾಮಸುಂದರ ಬಿದರಕುಂದಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಜ್ಜನ ಸಾಹಿತಿ, ಉತ್ತಮ ಸಂಘಟಕ ದಿ. ಡಾ|| ವರದರಾಜ ಹುಯಿಲಗೋಳರ 33 ನೇಪುಣ್ಯ ಸ್ಮರಣೆಯ ಅಂಗವಾಗಿ ದಿ. 10 ರಂದು ಅನ್ವೇಷಣ ಕೂಟದ ಆಶ್ರಯದಲ್ಲಿ ಸಾಧನಕೇರಿಯ `ಚೈತ್ರ’ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಲೇಖಕ ರಾಘವೇಂದ್ರ ಪಾಟೀಲರ ಕಥಾಸಂಕಲನ “ಮಾಯಿಯ ಮುಖಗಳು” ಕೃತಿಯನ್ನು ಕುರಿತು ಅವರು ಸಮೀಕ್ಷೆ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೃತಿಕಾರ ರಾಘವೇಂದ್ರ ಪಾಟೀಲರು ಮಾತನಾಡಿ ಈ ಕಥಾಸಂಗ್ರಹದ ರಚನೆ, ಆ ಕಾಲದ ಸಾಮಾನ್ಯ ಓದುಗನೊಬ್ಬನು ವ್ಯಕ್ತಪಡಿಸಿದ್ದ ಅಂತರಾಳದ ಅಭಿಮಾನದ ಮಾತುಗಳನ್ನು ನೆನಪಿಸಿಕೊಂಡರು.
ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿಟಲ್ ಕಾಲೇಜು ಇಂಗ್ಲಿಷಿನ ನಿವೃತ್ತ ಪ್ರಾಧ್ಯಾಪಕ ಡಾ|| ವಿ.ಟಿ. ನಾಯಕರು ಮಾತನಾಡಿ ಡಾ|| ವರದರಾಜ ಹುಯಿಲಗೋಳರಂಥ ವಿನಯವಂತ, ಸರಳ ಸಂಘಟನಾ ಚತುರ ಗುರುಗಳ ಒಡನಾಟದ ದಿನಗಳನ್ನು ಸ್ಮರಿಸಿಕೊಂಡರು.
ನಂತರ ನಡೆದ ಭಕ್ತಿ ಸಂಗೀತದ ಕಾರ್ಯಕ್ರಮದಲ್ಲಿ ಗಾಯಕಿ ರಶ್ಮೀ ರಮೇಶ ಕಾಖಂಡಿಕಿಯವರು ತಮ್ಮ ಶ್ರೀಮಂತ ಕಂಠದಲ್ಲಿ ದಾಸರ ಪದಗಳು, ಅಭಂಗಗಳು, ಭಾವಗೀತೆಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಜಯತೀರ್ಥ ಪಂಚಮುಖಿ, ಸಂವಾದಿನಿಯಲ್ಲಿ ಕಿರಣ ಅಯಾಚಿತ ಸಮರ್ಥ ಸಾಥ್ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ದಲಿತ ಕಥನದ ಪ್ರಮುಖ ಪ್ರತಿನಿಧಿ, ವ್ಯಥೆಗಳ ಕಥೆಗಾರ, ಖ್ಯಾತ ವಿಮರ್ಶಕ, ಜಾನಪದ ತಜ್ಞ ಮೊಗಳ್ಳಿ ಗಣೇಶ ಮತ್ತು ಆಕಾಶವಾಣಿಯ ಹಿರಿಯ ಕಲಾವಿದೆ, ಸುಗಮ ಸಂಗೀತ ಗಾಯಕಿ ಅನುರಾಧಾ ಧಾರೇಶ್ವರ ಈ ಇಬ್ಬರು ಮಹನೀಯರ ಅಗಲಿಕೆಯ ಕುರಿತು ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ ಶ್ರದ್ಧಾಂಜಲಿ ಗೊತ್ತುವಳಿ ಮಂಡಿಸಿದರು. ಎರಡು ನಿಮಿಷಗಳ ಮೌನ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಡಾ|| ಹ.ವೆಂ. ಕಾಖಂಡಿಕಿ, ಪ್ರೊ. ದುಷ್ಯಂತ ನಾಡಗೌಡ, ಡಾ|| ಬಾಳಣ್ಣ ಶೀಗಿಹಳ್ಳಿ, ಡಾ|| ಕೃಷ್ಣ ಕಟ್ಟಿ, ಜಿ.ಆರ್. ಭಟ್ಟ, ಅನಂತ ಥಿಟೆ, ಶ್ರೀಧರ ಗಾಂವಕರ, ಅನಂತ ಸಿದ್ಧೇಶ್ವರ, ಕೃಷ್ಣ ಬಾಗಲವಾಡಿ, ಜಯತೀರ್ಥ ಜಹಗೀರದಾರ್, ರಮೇಶ ಕಾಖಂಡಿಕಿ, ಡಾ|| ದೀಪಕ ಆಲೂರ, ಎಂ. ಬಿ. ಸದಾನಂದ, ಶ್ರೀಪಾದ ನಾಡಿಗೇರ, ರಮೇಶ ಇಟ್ನಾಳ, ಬಿ.ಜಿ. ಗುಂಡೂರ, ರಾಜೀವ ಪಾಟೀಲ ಕುಲಕರ್ಣಿ, ಪರಮೇಶ್ವರ ಎಂ.ಎಸ್., ಕುಮಾರಸ್ವಾಮಿ ಪುರಾಣಿಕಮಠ, ಎಸ್.ಬಿ. ದ್ವಾರಪಾಲಕ, ಬಿ.ಆಯ್. ಈಳಿಗೇರ, ಎಂ.ಎ. ಕಾಮಟೆ, ಅರುಣ ಕೊಣ್ಣೂರ, ಡಾ|| ಮಂದಾಕಿನಿ ಪುರೋಹಿತ, ಸರೋಜಾ ಕುಲಕರ್ಣಿ, ಶ್ರೀಮತಿ ಜ್ಯೋತಿದೇವಿ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.