
ಉಡುಪಿ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್
ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ
ಉಡುಪಿ ಅಕ್ಟೋಬರ್ ೧೦ : ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಹಲವಾರು ಕಾನೂನುಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದ ಸಮಸ್ತ ಕಾರ್ಮಿಕರಿಗೆ ಅನುಕೂಲವಾಗುವ ರೀತಿಯಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಏಳು ಕಾಯ್ದೆಗಳನ್ನು ಜಾರಿಗೊಳಿಸಿ ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯದಲ್ಲಿ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಅವರು ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಾರಿಗೆ ಇಲಾಖೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶ್ರೀ ಆರೂರು ಲಕ್ಷ್ಮೀನಾರಾಯಣರಾವ್ ಸ್ಮಾರಕ ಪುರ ಭವನದಲ್ಲಿ ಉಡುಪಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಗಿಗ್ ಕಾಯ್ದೆ, ಸಿನಿಕಾಯ್ದೆ, ಸಾರಿಗೆ ಕಾಯ್ದೆ ಸೇರಿದಂತೆ ಮುಂತಾದ ೭ ಕಾಯ್ದೆಗಳನ್ನು ಜಾರಿಗೊಳಿಸಿ ಕಾರ್ಮಿಕರ ಹಿತರಕ್ಷಣೆ ಕಾಪಾಡುತ್ತಿದೆ. ಆನ್ ಲೈನ್ ಹೋಂ ಡೆಲಿವರಿ ಉದ್ಯೋಗಗಳಲ್ಲಿ ತೊಡಗಿರುವ ಗಿಗ್ ಕಾರ್ಮಿಕರು, ಸಾರಿಗೆ ಕ್ಷೇತ್ರದಲ್ಲಿ ತೊಡಗಿರುವವರು, ಸಿನಿಮಾ ಮತ್ತು ಜಾನಪದ ಕಲಾ ಪ್ರಕಾರಗಳಲ್ಲಿ ತೊಡಗಿರುವ ಕಲಾವಿದರು, ತಂತ್ರಜ್ಞರು, ಕೂಲಿ ಕಾರ್ಮಿಕರು, ಸವಿತಾ ಸಮಾಜದವರು, ಬೀಡಿ, ಟೈಲರಿಂಗ್ ಮುಂತಾದ ವೃತ್ತಿಗಳಲ್ಲಿ ತೊಡಗಿರುವ ೧೦೧ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಿ ಕಾರ್ಮಿಕ ಇಲಾಖೆಯಡಿ ಏಕೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ನಡೆಯುತ್ತಿದೆ ಎಂದರು.
ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣ ಕಾಯುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಸೆಸ್ ೧ ರೂ. ಕಾರ್ಮಿಕ ಇಲಾಖೆಗೆ ನೀಡುವಂತೆ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದೇವೆ. ಲೀಟರ್‌ಗೆ ಒಂದು ೧ ರೂ. ನಂತೆ ವಾರ್ಷಿಕ ೨೫೦೦ ಕೋಟಿ ರೂ. ಬರಲಿದ್ದು, ಈ ಮೂಲಕ ೧.೩೦ ಕೋಟಿ ಜನಸಂಖ್ಯೆವುಳ್ಳ ಕಾರ್ಮಿಕರಿಗೆ ೧೦-೧೫ ಲಕ್ಷ ರೂ. ಹೆಲ್ತ್ ಕಾರ್ಡ್ ಸೌಲಭ್ಯ ನೀಡಲಾಗುವುದು ಎಂದರು.
ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಬಿಲ್‌ಗಳನ್ನು ತಂದಿದ್ದು, ಕಾರ್ಮಿಕರ ಅನುಕೂಲತೆಗೆ ತಕ್ಕಂತೆ ನಿಯಾಮಾವಳಿಯನ್ನು ರೂಪಿಸಲಾಗುತ್ತದೆ. ಸಿನೆಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಬಿಲ್ ತರಲಾಗಿದೆ. ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾ ದೀಪ ಯೋಜನೆ)ಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ೨೧ ಸಾವಿರ ರೂ. ವೇತನ ಪಡೆಯುವ ಉದ್ಯೋಗಿಗಳಷ್ಟೇ ಇಎಸ್‌ಐ ಸೌಲಭ್ಯದಡಿಯಲ್ಲಿ ಬರುತ್ತಿದ್ದು, ೩೦ ಸಾವಿರ ರೂ. ವರೆಗೂ ವೇತನ ಪಡೆಯುವವರನ್ನು ಇಎಸ್‌ಐ ಯೋಜನೆಗೆ ತರುವುದಕ್ಕೆ ೮ ತಿಂಗಳ ಹಿಂದೆಯೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಈ ಬಗ್ಗೆ ಬಿಜೆಪಿ ಶಾಸಕರು, ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದರು.
ಸರಕು ಸಾಗಾಣೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ತೊಡಗಿರುವ ಕಾರ್ಮಿಕರು ಮೃತಪಟ್ಟಲ್ಲಿ ೫ ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ ೧,೭೨,೦೦೦ ಜನರು ಅಪಘಾತದಲ್ಲಿ ಮರಣ ಹೊಂದುತ್ತಿದ್ದು ಸ್ಥಳೀಯ ಶಾಸಕರು, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು. ಹೊರಗುತ್ತಿಗೆ ನೌಕರರ ವೇತನ ಸಮಸ್ಯೆಗಳನ್ನು ಪರಿಹರಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಸೊಸೈಟಿಗಳನ್ನು ಸ್ಥಾಪಿಸಿ ಹೊರಗುತ್ತಿಗೆ ನೌಕರರನ್ನು ನೋಂದಣಿ ಮಾಡಿಸಲಾಗುವುದು ಎಂದ ಅವರು೨೦ಕ್ಕಿಂತ ಹೆಚ್ಚಿನ ಕಾರ್ಮಿಕರಿರುವ ಕಂಪನಿಗಳಲ್ಲಿ ಕಡ್ಡಾಯ ಗ್ರಾಚ್ಯುಟಿ ನೀಡಲು ತಿಳಿಸಲಾಗಿದ್ದು ಇದರ ಹಣ ನೇರವಾಗಿ ಕಾರ್ಮಿಕರಿಗೆ ತಲುಪಲಿದೆ ಎಂದರು.
ಮಧ್ಯಮ ಹಾಗೂ ಬಡ ಜನರ ಅಭಿವ್ರದ್ಧಿಗಾಗಿ ಸರಕಾರ ೬೦ ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗಾಗಿ ಖರ್ಚುಮಾಡುತ್ತಿದೆ ಎಂದ ಅವರು ಆಶಾದೀಪಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿಸಿದವರನ್ನು ಉದ್ಯೋಗಕ್ಕೆ ಸೇರಿಸಿಕೊಂಡರೆ ಅಂತಹ ಸಂಸ್ಥೆಗಳಿಗೆ ಶೇ. ೫೦ ರಷ್ಟು ಹಣವನ್ನು ನೀಡುತ್ತೇವೆ. ಈ ಯೋಜನೆಯಡಿ ೬೪೭೩ ಅಭ್ಯರ್ಥಿಗಳಿಗೆ ಸಂಬAಸಿ ಇಎಸ್‌ಐ, ಇಪಿಎಫ್ ವಂತಿಕೆ, ಶಿಷ್ಯವೇತನ, ವೇತನ ಮರುಪಾವತಿ ಸಹಿತ ೨೫೪ ಸಂಸ್ಥೆಗಳಿಗೆ ಒಟ್ಟು ೧೮.೧೯ ಕೋಟಿಯನ್ನು ಉದ್ಯೋಗದಾತರಿಗೆ ಮರುಪಾವತಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು ೮೭ ಅಭ್ಯರ್ಥಿಗಳಿಗೆ ಸಂಬAಧಿಸಿ ೧೩ ಸಂಸ್ಥೆಗಳಿಗೆ ಒಟ್ಟು ೨೪.೯೮ ಲಕ್ಷ ರೂ. ಉದ್ಯೋಗದಾತರಿಗೆ ಮರುಪಾವತಿಸಲಾಗಿದೆ ಎಂದರು.
ಗೃಹ ಕಾರ್ಮಿಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ದಿ ಕರ್ನಾಟಕ ಡೊಮಸ್ಟಿಕ್ ವರ್ಕ್ ಬಿಲ್-೨೦೨೫ ಮತ್ತು ಮಹಿಳೆಯರ ಮಾಸಿಕ ಋತುಚಕ್ರ ಅವಧಿಯಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಕರಡು ನಿಯಮವನ್ನು ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಪಕ್ಷ, ಮನೆಯ ದುಡ್ಡಲ್ಲ, ಜನರ ಹಣ :
ಯಾವುದೇ ರಾಜಕೀಯ ಪಕ್ಷ/ಸರಕಾರ ಸಹಿತ ಯಾರೂ ಕೂಡಾ ತಮ್ಮ ಮನೆಯಿಂದ ಹಣ ತರಲ್ಲ. ಇದು ಜನರ ದುಡ್ಡು. ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಯೋಜನೆ ಮಾಡಿದರೂ ಅದು ಅವರ ದುಡ್ಡಲ್ಲ. ಅದು ಜನಸಾಮಾನ್ಯರ ಹಣ. ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿ ಜನರಿಗೆ ನೀಡುವುದಾಗಿದೆ ಎಂದರು.
ಪ್ರಜ್ಞಾವಂತ ಸಮಾಜ ನಿರ್ಮಿಸಿ :
ಪ್ರಜ್ಞಾವಂತ ನಾಗರಿಕರು ವಿಚಾರಧಾರೆಯಾಗಿ ದೇಶವನ್ನು ಕಟ್ಟಬೇಕು. ಸರಿ, ತಪ್ಪುಗಳನ್ನು ತಿಳಿದು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ಹೊಸತನ ಬರಬೇಕು. ಸೋಶಿಯಲ್ ಮೀಡಿಯಾದಲ್ಲಿನ ಹಸಿ ಸುಳ್ಳುಗಳ ಬಗ್ಗೆ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಸತ್ಯವಂತರಿಗೂ, ಭ್ರಷ್ಟಾಚಾರಿಗಳಿಗೂ ವ್ಯತ್ಯಾಸವಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಶಿಕ್ಷಣ, ಆರೋಗ್ಯ, ಆರ್ಥಿಕ ಕ್ಷೇತ್ರದಲ್ಲಿ ಉಡುಪಿ ಮುಂಚೂಣಿಯಲ್ಲಿದ್ದು, ದೇಶಕ್ಕೆ ಮಾದರಿಯಾಗಿದೆ. ಉಡುಪಿಯ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕೆಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಬೇಕು. ಕಾರ್ಮಿಕರಿಗೆ ಸೂಕ್ತ ಶಲ್ಟರ್ ವ್ಯವಸ್ಥೆಯಾಗಬೇಕು. ಈ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನಿಸಬೇಕೆಂದರು.
ಕಾರ್ಮಿಕ ಇಲಾಖೆ ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆಯನ್ನು ಓದಿದರು. ಹಾಸನ ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಎಚ್.ಎಲ್. ಗುರುಪ್ರಸಾದ್ ಸ್ವಾಗತಿಸಿದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಂಟಿ ಕಾರ್ಮಿಕ ಆಯುಕ್ತ ಹಾಗೂ ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ದಿನಕರ ಹೇರೂರು, ಕರಾವಳಿ ಅಭಿವೃದ್ಧಿ ಮಂಡಳಿ ಮಂಗಳೂರು ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ಅÃಕ್ಷಕ ಹರಿರಾಂ ಶಂಕರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಉದಯ ಶೆಟ್ಟಿ ಮುನಿಯಾಲು, ರಮೇಶ್ ಕಾಂಚನ್, ಲಾವಣ್ಯ ಬಲ್ಲಾಳ್, ಟಿ.ಎಂ. ಶಾಹೀದ್ ತೆಕ್ಕಿಲ್, ಮುಂಡರಗಿ ನಾಗರಾಜ್, ಕಾರ್ಮಿಕ ಅಕಾರಿಗಳಾದ ಕಮಲ್ ಷಾ ಅಲ್ತಾಫ್ ಅಹ್ಮದ್, ಕಾರ್ಮಿಕ ನಿರೀಕ್ಷಕರಾದ ಸಂಜಯ್, ಮಲ್ಲಿಕ್ ಪ್ರಸಾದ್, ನವೀನ್, ವಿಜಯೇಂದ್ರ ಸಹಿತ ಅನೇಕರು ಉಪಸ್ಥಿತರಿದ್ದರು.
ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ವಂದಿಸಿದರು.