ಧಾರವಾಡ 18 : ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾಗಿ ನೇಮಕಗೊಂಡ ಡಾ. ಐ. ಸಿ. ಮುಳಗುಂದ ಇವರನ್ನು ಸಿಂಡಿಕೇಟ್ ಸದಸ್ಯರನ್ನೊಳಗೊಂಡ ನಿಯೋಗವು ಸನ್ಮಾನಿಸಿ ಶುಭಹಾರೈಸಿತು.

ಐತಿಹಾಸಿಕ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ನೇಮಕಗೊಂಡ ಡಾ. ಐ. ಸಿ. ಮುಳಗುಂದ ಅವರನ್ನು ಇಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಿಂಡಿಕೇಟ್ ಸದಸ್ಯರುಗಳಾದ ರಾಬರ್ಟ ದದ್ದಾಪುರಿ, ಶ್ಯಾಮ ಮಲ್ಲನಗೌಡರ, ಡಾ. ಬಸವರಾಜ ಗೊರವರ ಮತ್ತು ಮಹೇಶ ಹುಲೆನ್ನವರ ಸನ್ಮಾನಿಸಿ ಶುಭ ಹಾರೈಸಿದರು.

ನಿಯೋಗದಲ್ಲಿ ಜೇಮ್ಸ್ ಯಾಮಾ ಮತ್ತು ಬಾಬಾ ಶೇಖಸನದಿ ಉಪಸ್ಥಿತರಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಸಿಂಡಿಕೇಟ ಸದಸ್ಯ ರಾಬರ್ಟ ದದ್ದಾಪುರಿ ಅವರ ನೇತೃತ್ವದಲ್ಲಿ ಹೃದಯಸ್ಪರ್ಶಿಯಾಗಿ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಜರುಗಿತು.

ಕರ್ನಾಟಕ ಕಲಾ ಮಹಾವಿದ್ಯಾಲಯದ 26 ನೇ ಪ್ರಾಚಾರ್ಯರಾಗಿ ಡಾ. ಐ. ಸಿ. ಮುಳಗುಂದ ಅವರು ಆಯ್ಕೆಗೊಂಡಿದ್ದು ಸಿಂಡಿಕೇಟ ಸದಸ್ಯರುಗಳ ಸನ್ಮಾನಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮಹಾವಿದ್ಯಾಲಯದ ಹಲವು ಕುಂದು ಕೊರತೆಗಳನ್ನು ಸಿಂಡಿಕೇಟ ಸದಸ್ಯರುಗಳಿಗೆ ಮನವರಿಕೆ ಮಾಡಿಕೊಟ್ಟು ಸಿಂಡಿಕೇಟ್ ಸದಸ್ಯರುಗಳ ಸಹಕಾರವನ್ನು ಕೋರಿದರು.

ಕರ್ನಾಟಕ ಕಲಾ ಮಹಾವಿದ್ಯಾಲಯವು 1917 ರಲ್ಲಿ ಪ್ರಾರಂಭವಾಗಿದ್ದು ಇಂದು ಅನೇಕ ಹೊಸ ಕೋರ್ಸುಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕರ್ನಾಟಕ ಮಹಾವಿದ್ಯಾಲಯವು ಇಂದಿನ ವಿದ್ಯಾರ್ಥಿ ಸಮುದಾಯದ ಬೇಡಿಕೆಗಳಿಗೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಅವರುಗಳ ಭವಿಷ್ಯಕ್ಕೆ ಶೈಕ್ಷಣಿಕವಾಗಿ ಸ್ಪಂದಿಸುತ್ತಿದ್ದು ಇಂದಿಗೂ ದೇಶದಲ್ಲಿ ಮಾದರಿಯಾಗಿ ನಿಂತಿದೆ.

ನೂತನ ಪ್ರಾಚಾರ್ಯರಿಗೆ ಆಡಳಿತಾತ್ಮಕವಾಗಿ ಎಲ್ಲ ಸಹಕಾರವನ್ನು ನೀಡುವುದಾಗಿ ಸಿಂಡಿಕೇಟ್‌ ಸದಸ್ಯರು ಒತ್ತಿ ಹೇಳಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರ, ಶಿಕ್ಷಕ ಶಿಕ್ಷಕೇತರರ ರಕ್ಷಣೆಗೆ, ಮಹಾವಿದ್ಯಾಲಯದ ಅಭಿವೃದ್ಧಿಗೆ ಯಾವತ್ತೂ ಸಿಂಡಿಕೇಟ ಬೆಂಬಲವಾಗಿರುತ್ತದೆ ಎಂದು ಹೇಳಿದರು.