ಧಾರವಾಡ : ಶಾಸಕರಾದ ಅರವಿಂದ ಬೆಲ್ಲದ ಅವರ ನೇತೃತ್ವದಲ್ಲಿ, ಬಿಜೆಪಿ ಕಾರ್ಯಕರ್ತರು ಸಹಯೋಗದೊಂದಿಗೆ ನಿನ್ನೆ ಧಾರವಾಡದ ಕೆ ಎಲ್ ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳವು ಯಶಸ್ವಿಯಾಗಿ ಸಮಾರೋಪಗೊಂಡಿತು.
ಈ ಉದ್ಯೋಗ ಮೇಳವನ್ನು ಶಾಸಕರಾದ ಅರವಿಂದ ಬೆಲ್ಲದ ಅವರು ಉದ್ಘಾಟಿಸಿ ಮಾತನಾಡಿ ” ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ. ಅಲ್ಲದೇ, ನೇಮಕಾತಿಗಳೂ ವಿನಾಕಾರಣ ವಿಳಂಬಗೊಳ್ಳುತ್ತಿವೆ. ಆಯ್ಕೆ ಪರೀಕ್ಷೆ ನಡೆಸುವಲ್ಲಿಯೂ ನಿರ್ಲಕ್ಷ್ಯತನ ತೋರುತ್ತಿರುವುದರಿಂದ, ನಡೆದ ಪರೀಕ್ಷೆಗಳಲ್ಲಿಯೂ ಎಡವಟ್ಟುಗಳಾಗಿ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ನಿರುದ್ಯೋಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ, ಉತ್ತರ ಕರ್ನಾಟಕದ ಉದ್ಯೋಗಾಕಾಂಕ್ಷಿ ಯುವಜನತೆಗೆ ಪಾರದರ್ಶಕ ಹಾಗೂ ಪಕ್ಷಪಾತವಿಲ್ಲದ ಸೂಕ್ತ ವೇದಿಕೆಯನ್ನು ಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಈ ಬೃಹತ್ ಉದ್ಯೋಗ ಮೇಳ ಮುನ್ನುಡಿಯಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ, ನಾವು ಯುವ ಸಮುದಾಯವನ್ನು ಸದೃಢಗೊಳಿಸಬೇಕಿದೆ” ಎಂದರು. ಅಲ್ಲದೇ, ಈ ಉದ್ಯೋಗಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ 67 ಕ್ಕೂ ಅಧಿಕ ಕಂಪನಿಗಳು, 2890 ಉದ್ಯೋಗಾಕಾಂಕ್ಷಿಗಳನ್ನು ಸಂದರ್ಶನ ನಡೆಸಿದವು. ಇದರಲ್ಲಿ 1035 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.