ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ಖುದ್ದು ಕಾಂಗ್ರೆಸ್ ಶಾಸಕರು ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ, ಬಸವರಾಜ ರಾಯರೆಡ್ಡಿ ಅವರು ಒಪ್ಪಿಕೊಂಡಿದ್ದಾರೆ. ಸ್ವಪಕ್ಷೀಯ ಶಾಸಕರೇ ಭ್ರಮನಿರಸನಗೊಂಡು, ಸರಕಾರದ ವಿರುದ್ಧ ಗಂಭೀರ ಆರೋಪ ಮಾಡುವಷ್ಟರ ಮಟ್ಟಿಗೆ, ರಾಜ್ಯ ಪರಿಸ್ಥಿತಿಗೆ ಹದಗೆಟ್ಟಿದೆ. ಇದು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೈತಿಕ ದೌರ್ಬಲ್ಯವನ್ನು ಎತ್ತಿ ಹಿಡಿದಿದೆ.

“ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂ.1 ಆಗಿದೆ. ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವಾಗ, ಅಭಿವೃದ್ಧಿ ಹೇಗೆ ಸಾಧ್ಯ?” ಎಂದು ಪ್ರಶ್ನಿಸುವ ಮೂಲಕ, ಕಾಂಗ್ರೆಸ್ಸಿನ ದುರಾಡಳಿತದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರವು ವ್ಯಾಪಕವಾಗಿ ಹರಡಿಕೊಂಡಿರುವುದನ್ನು ಖುದ್ದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿಯವರೇ ಒಪ್ಪಿಕೊಂಡಿದ್ದಾರೆ.

https://youtu.be/eCv_gSLLdaE?si=aUDJR7SV7R1mEiW3

ತಮ್ಮದೇ ಆರ್ಥಿಕ ಸಲಹೆಗಾರರು ಹಾಗೂ ಸ್ವಪಕ್ಷೀಯ ಶಾಸಕರಿಂದಲೇ ಇಂತಹ ಆರೋಪ ಎದುರಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಇನ್ನೊಂದು ಕ್ಷಣವೂ ಮುಂದುವರೆಯುವುದು ಉಚಿತವಲ್ಲ. ಅಲ್ಲದೇ, ತಮ್ಮದೇ ಆರ್ಥಿಕ ಸಲಹೆಗಾರರ ನಂಬಿಕೆ ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಸಿದ್ದರಾಮಯ್ಯನವರಿಗೆ, ಸಿಎಂ ಕುರ್ಚಿಯಲ್ಲಿ ಕೂರಲು ಯಾವ ನೈತಿಕತೆ ಉಳಿದಿದೆ? ಮಿತಿ ಮೀರಿದ ಭ್ರಷ್ಟಾಚಾರ, ಬೆಲೆ ಏರಿಕೆ, ಸಾಲು ಸಾಲು ಹಗರಣ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ.

ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ, ಪಾರದರ್ಶಕತೆ, ಜನಪರ ಯೋಜನೆಗಳು ಎಂಬ ಶಬ್ದಗಳು ಕೇವಲ ಪ್ರಚಾರದ ಸರಕುಗಳಾಗಿವೆ. ತಮ್ಮ ಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರ ಕುರಿತು ತರಾಟೆಗೆ ಒಳಗಾಗುವಷ್ಟು ಗಂಭೀರವಾಗಿದೆ ರಾಜ್ಯದ ಇಂದಿನ ಪರಿಸ್ಥಿತಿ ಬಸವರಾಜ ರಾಯರೆಡ್ಡಿಯವರು ಕಾಂಗ್ರೆಸ್ಸಿನ ನಿಜಬಣ್ಣವನ್ನು ಬಯಲಿಗೆಳೆದಿದ್ದಾರೆ. ಅವರ ಧೈರ್ಯಕ್ಕೆ ಅಭಿನಂದನೆ ಸಲ್ಲಿಸುತ್ತಾ, ಇಂತಹ ಅಪಾರ ಪ್ರಮಾಣದ ಭ್ರಷ್ಟಾಚಾರಕ್ಕೆ ಮೂಲ ಕಾರಣಕರ್ತರಾಗಿರುವ ಸಿದ್ಧರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಕಾಪಾಡಬೇಕೆಂದು ಆಗ್ರಹಿಸಿದರು.