ಭೀಮಾ ಕೋರೆಗಾವ್ ಸ್ವಾಭಿಮಾನ ಹೋರಾಟಕ್ಕೆ 208 ವರ್ಷಗಳು ಧಾರವಾಡದಲ್ಲಿ ವೀರ ಯೋಧರಿಗೆ ಗೌರವ ನಮನ

ಧಾರವಾಡ  : 1818ರ ಜನವರಿ 1ರಂದು ನಡೆದ ಐತಿಹಾಸಿಕ ಭೀಮಾ ಕೋರೆಗಾವ್ ಕದನದ ಸ್ವಾಭಿಮಾನ ಹಾಗೂ ಆತ್ಮಗೌರವ ಹೋರಾಟಕ್ಕೆ ಇಂದಿಗೆ 208 ವರ್ಷಗಳು ಪೂರ್ತಿಯಾಗಿವೆ. ಪ್ರಪಂಚದಾದ್ಯಂತ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಸ್ವಾತಂತ್ರ್ಯ ಮತ್ತು ಸಮಾನತೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಸೈನಿಕರಿಗೆ ನಮನ ಸಲ್ಲಿಸುವ ದಿನವೂ ಇದಾಗಿದೆ.

ಭೀಮಾ ಕೋರೆಗಾವ್ ಯುದ್ಧದಲ್ಲಿ ಅಂದಿನ ಮಹಾರ ಸೇನೆಯು ಸುಮಾರು 12 ಗಂಟೆಗಳ ಕಾಲ ಅಸಾಧಾರಣ ಸಾಹಸದಿಂದ ಹೋರಾಡಿ, ಪೇಶ್ವೆಗಳ ಭಾರಿ ಸೈನ್ಯವನ್ನು ಹಿಮ್ಮಟ್ಟಿಸಿತು. ಅಸ್ಪೃಶ್ಯರೆಂದು ತಿರಸ್ಕೃತರಾಗಿದ್ದ ಮಹಾರ ಸಮುದಾಯದ ಈಸ್ಟ್ ಇಂಡಿಯಾ ಕಂಪನಿಯ ಸುಮಾರು 800 ಸೈನಿಕರು, ಸುಮಾರು 28,000ಕ್ಕೂ ಹೆಚ್ಚು ಪೇಶ್ವೆಗಳ ಸೈನ್ಯವನ್ನು ಎದುರಿಸಿ ಜಯ ಸಾಧಿಸಿದರು. ಈ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾರ ಸೈನಿಕರ ಸ್ಮರಣಾರ್ಥವಾಗಿ ಅಂದಿನ ಬ್ರಿಟಿಷರು ಕೋರೆಗಾವ್‌ನಲ್ಲಿ ವಿಜಯಸ್ತಂಭವನ್ನು ನಿರ್ಮಿಸಿದರು.

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು 1927 ರಿಂದಲೇ ಪ್ರತಿವರ್ಷ ಜನವರಿ 1ರಂದು ವಿಜಯಸ್ತಂಭಕ್ಕೆ ಭೇಟಿ ನೀಡಿ, ಮಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುತ್ತಿದ್ದರು. ಆ ಪರಂಪರೆಯನ್ನು ಮುಂದುವರೆಸುತ್ತ, ಧಾರವಾಡದ ಹತ್ತಿರವಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಸಮ್ಮುಖದಲ್ಲಿ ಸಾಂಕೇತಿಕವಾಗಿ ಮಾಲಾರ್ಪಣೆ, ಜ್ಯೋತಿ ಮತ್ತು ಮೇಣಬತ್ತಿ ಬೆಳಗಿಸುವ ಮೂಲಕ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಶೋಕ್ ಭಂಡಾರಿ, ಲಕ್ಷ್ಮಣ್ ಬಕಾಯಿ, ಸಂದೀಪ್ ಮಿಶ್ರಿಕೋಟಿ, ಮಂಜುನಾಥ್ ಸವದತ್ತಿ, ಆನಂದ್ ಕೊನ್ನೂರು, ರಾಘವೇಂದ್ರ ಬೆಟಿಗೇರಿ ಸೇರಿದಂತೆ ಅನೇಕ ಮುಖಂಡರು, ಬುದ್ಧರಕ್ಷಿತ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.