ವಾರದ ಸಂತೆಗೆ ವ್ಯಾಪಾರಕ್ಕೆ ಹೊರಟವರು ಬಾರದ ಲೋಕಕ್ಕೆ. ಮಂಜು ಮುಸುಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ.
ಯಲ್ಲಾಪುರ 22 : ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ಕುಮಟಾಕ್ಕೆ ಹೊರಟಿದ್ದ ತರಕಾರಿ ತುಂಬಿದ್ದ ಲಾರಿ ಇಂದು ಬೆಳಗಿನ ಜಾವ ಅರಬೈಲ ಘಟ್ಟದ ಸಮೀಪದ ಗುಳ್ಳಾಪುರ ಬಳಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಪಲ್ಟಿಯಾಗಿ, ಅದರಲ್ಲಿದ್ದ 10 ಮಂದಿ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ಬುಧವಾರ ಈ ಅವಘಡ ಸಂಭವಿಸಿದ್ದು 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ತುಂಬಿದ್ದ ಲಾರಿಯಲ್ಲಿ 25 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕುಮಟಾದಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಎಲ್ಲರೂ ತರಕಾರಿ ಸಾಗಿಸುತ್ತಿದ್ದು, ಬೆಳಗಿನ ಜಾವ ರಸ್ತೆಯಲ್ಲಿ ಮಂಜು ಮುಸುಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಶವಗಳನ್ನು ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ನಾರಾಯಣ್ ಸ್ಥಳಕ್ಕೆ
ಭೇಟಿ ನೀಡಿ ನೀಡಿದ್ದಾರೆ.