ಎಸ್.ಸಿ.ಎಸ್.ಎ ಮತ್ತು ಟಿ.ಎಸ್.ಎ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

ಮಾರ್ಚ ಅಂತ್ಯದೊಳಗೆ ನಿಗದಿತ ಗುರಿ ಮತ್ತು ಪ್ರಗತಿ ಸಾಧಿಸಬೇಕು; ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತು ಜನಜಾಗೃತಿ ಮೂಡಿಸಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ  ಡಿಸೆಂಬರ 31: ವಿವಿಧ ಇಲಾಖೆಗಳ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಮಾರ್ಚ 2025 ರೊಳಗೆ ಬಳಕೆ ಮಾಡಿಕೊಂಡು ಕ್ರಿಯಾಯೋಜನೆ ಅನುಸಾರ ನಿಗದಿತ ಗುರಿ ಮತ್ತು ಪ್ರಗತಿಯನ್ನು ಸಾಧಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2023-24 ನೇ ಸಾಲಿನ ನವೆಂಬರ 2024 ರ ಅಂತ್ಯದವರೆಗಿನ ಧಾರವಾಡ ಜಿಲ್ಲೆಯ ವಿವಿಧ ಇಲಾಖೆಗಳ ಎಸ್.ಸಿ.ಎಸ್.ಎ ಮತ್ತು ಟಿ.ಎಸ್.ಎ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದಿಂದ ಪ್ರತಿ ಇಲಾಖೆಗೆ ಬಿಡುಗಡೆಯಾಗುವ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ವೈಯಕ್ತಿಕ ಮತ್ತು ಸಾಮುದಾಯಿಕ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಕೈಗೊಳ್ಳಬೇಕು. ಬಹುತೇಕ ಇಲಾಖೆಗಳು ಕ್ರಿಯಾಯೋಜನೆ ಸಲ್ಲಿಸಿ, ಅನುಮೋದನೆ ಪಡೆದುಕೊಂಡಿವೆ. ನಿಗದಿಯಂತೆ ಕಾಲಮಿತಿಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕು ಮತ್ತು ಯಾವುದೇ ರೀತಿಯಲ್ಲಿ ಅನುದಾನ ಲ್ಯಾಪ್ಸ್ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಿಯಮಾನುಸಾರ ಕೆಲವು ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಶಾಸಕರ ಅಧ್ಯಕ್ಷತೆಯ ಸಮಿತಿಗಳ ಸಭೆಗಳನ್ನು ಶೀಘ್ರದಲ್ಲಿ ನಿಗದಿಗೊಳಿಸಿ, ಫಲಾನುಭವಿಗಳ ಪಟ್ಟಿಗೆ ಶಾಸಕರಿಂದ ಅನುಮೋದನೆ ಪಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಒಬ್ಬ ಫಲಾನುಭವಿ ಒಂದು ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಫಲಾನುಭವಿಗಳ ಆಯ್ಕೆಯಲ್ಲಿ ನಕಲು ಆಗದಂತೆ ಎಚ್ಚರಿಕೆ ವಹಿಸಬೇಕು. ಮತ್ತು ಇಲಾಖೆಗಳಲ್ಲಿ ಆಂತರಿಕ ಸಂಪರ್ಕ ಮತ್ತು ಸಮನ್ವಯದ ಮೂಲಕ ಅರ್ಹ ಫಲಾನುಭವಿಯನ್ನು ಆಯ್ಕೆ ಮಾಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಜಿಲ್ಲೆಯ ಪ್ರತಿ ನಗರ ಮತ್ತು ಗ್ರಾಮಗಳಿಗೆ ತಲುಪಿಸಲು ಜನಜಾಗೃತಿ ಕಾರ್ಯಕ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇಂದಿನ ಸಭೆಗೆ ಕಾರಣ ತಿಳಿಸದೇ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡಿ, ಉತ್ತರ ಪಡೆಯುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆ:  ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ 2024 ನೇ ಸಾಲಿನ 4 ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿ ಸಭೆ ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತ್ತು.
ಸಭೆ ಉದ್ದೇಶಿಸಿ ಅವರು ಮಾತನಾಡಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿನ ಪೌರಕಾರ್ಮಿಕರ ಕೆ.ವೈ.ಸಿ ಅಪ್‍ಡೇಟ್ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಮುಕ್ತಾಯಗೊಳಿಸಬೇಕು. ಮತ್ತು ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಳೆದ ಸಭೆಯಲ್ಲಿ ಚರ್ಚಿಸಿರುವಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿನ ಪೌರಕಾರ್ಮಿಕರಿಗೆ ಬಾಕಿ ಇರುವ ಸಂಕಷ್ಟ ಭತ್ಯೆಯನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ಅವರು ಸೂಚಿಸಿದರು.
ಪೌರಕಾರ್ಮಿಕರಿಗೆ ಕೆಎಮ್‍ಎಫ್, ಕೆಯುಡಿ ಸೇರಿದಂತೆ ವಿವಿಧ ಸ್ವಾಯತ್ತ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಉಪಹಾರ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ನಿರ್ಮಿಸಿರುವ ತಾತ್ಕಾಲಿಕ ವಿಶ್ರಾಂತಿ ಕೇಂದ್ರಗಳನ್ನು ಸದುಪಯೋಗ ಪಡೆಸಿಕೊಳ್ಳಲು ಅವರಿಗೆ ಹೆಚ್ಚು ಅವಕಾಶ ನೀಡಬೇಕು. ಈ ಹಿನ್ನಲೆಯಲ್ಲಿ ಆಯಾ ವಲಯ ಅಧಿಕಾರಿಗಳು ಮೇಲಸ್ತುವಾರಿ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ: 2024 ನೇ ಸಾಲಿನ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 4ನೇ ತ್ರೈಮಾಸಿಕ ಸಭೆಯು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ ಜರುಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು ಮಾತನಾಡಿ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಫೋಕ್ಸೊ ಮತ್ತು ಎಸ್.ಸಿ., ಎಸ್.ಟಿ. ಹಾಗೂ ಇತರೆ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ವಿಲೇವಾರಿಗೊಳಿಸಲು ಕ್ರಮವಹಿಸಬೇಕು. ಬಾಕಿ ಇರುವ ಹಳೆಯ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ನ್ಯಾಯ ತೀರ್ಮಾನಕ್ಕೆ ಒಳಪಡುವಂತೆ ಸರ್ಕಾರಿ ಅಭಿಯೋಜಕರು, ಪೊಲೀಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪರಿಹಾರ ಹಣ ಮಂಜೂರಾತಿ ಪ್ರಕರಣಗಳು, ಅನುಕಂಪ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ್ ಅವರು 2024 ನೇ ಸಾಲಿನಲ್ಲಿ ಸೆಪ್ಟೆಂಬರ 30 ವರೆಗೆ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 35 ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳಿಗೆ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವದರಿಂದ 60 ದಿನಗಳ ಅವಧಿ ಮೀರಿದ್ದು, ಉಳಿದ ಪ್ರಕರಣಗಳಲ್ಲಿ ಚಾರ್ಜ ಶೀಟ್ ವರದಿ ಸಲ್ಲಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿದ್ದ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಪೂರಕ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭ ಅವರು ಸ್ವಾಗತಿಸಿ, ಸಭೆಗಳನ್ನು ನಿರ್ವಹಿಸಿದರು. ಸಭೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ಸರ್ಕಾರಿ ಅಭಿಯೋಜಕರು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳು, ಸಹಾಯಕ ಪೊಲೀಸ್ ಆಯುಕ್ತರು, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.
  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!