ಆಸ್ಪತ್ರೆಗಳಲ್ಲಿ ಉಚಿತ – ಗುಣಮಟ್ಟದ ಚಿಕಿತ್ಸೆ ಒದಗಿಸಲು, ಆರೋಗ್ಯ ಕ್ಷೇತ್ರದ ಖಾಸಗಿಕರಣ ನಿಲ್ಲಿಸಲು ಆಗ್ರಹಿಸಿ ಪ್ರತಿಭಟನೆ.

ಧಾರವಾಡ 31 : ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ಆರ್‌ಐ ಸೇರಿದಂತೆ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಲು, ಆರೋಗ್ಯ ಕ್ಷೇತ್ರದ ಖಾಸಗಿಕರಣ ನಿಲ್ಲಿಸಲು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್.ಯು.ಸಿ.ಐ-ಸಿ) ಪಕ್ಷದಿಂದ ಧಾರವಾಡದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ಬಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಂದ, ಬಡಾವಣೆಗಳಿಂದ ಹಳ್ಳಿಗಳಿಂದ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಔಷಧಿಗಳು ಹಾಗೂ ವೈದ್ಯಕೀಯ ನಿರ್ಲಕ್ಷದಿಂದಾಗಿ ಬೆಳಗಾವಿ, ಬಳ್ಳಾರಿ, ಚಿಗಟೇರಿ, ಸಿದ್ದಾಪುರ ಹಲವಾರು ಕಡೆ ಬಾಣಂತಿಯರು ಮತ್ತು ನೂರಾರು ಹಸುಗೂಸುಗಳು ಸಾವನ್ನಪ್ಪಿವೆ.
ಹಲವಾರು ಆಸ್ಪತ್ರೆಗಳಲ್ಲಿ ಅವಶ್ಯಕ ನುರಿತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳೇ ಇಲ್ಲ. ರಾಜ್ಯದಲ್ಲಿ ಔಷಧಿಗಳ ಕೊರತೆಯಂತೂ ವಿಪರೀತವಾಗಿದೆ. ಅವಶ್ಯಕತೆಯ ಶೇಕಡ 30ರಷ್ಟು ಮಾತ್ರ ಔಷಧಗಳು ಉಗ್ರಾಣದಲ್ಲಿರುವುದು ಇತ್ತೀಚೆಗೆ ವರದಿಯಾಗಿದೆ. ಆದರೆ ಸಮರ್ಪಕ ಔಷಧಿಗಳ ಪೂರೈಕೆಗೆ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ. ಇದು ಸರ್ಕಾರಗಳ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಗೆಗಿನ ನಿಷ್ಕಾಳಜಿಯನ್ನು ತೋರಿಸುತ್ತದೆ. ವ್ಯತಿರಿಕ್ತವಾಗಿ ವರ್ಷದಿಂದ ವರ್ಷಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಅನುದಾನವನ್ನು ಕಡಿತಗೊಳಿಸುತ್ತಾ ಬರುತ್ತಿವೆ. ಈ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತಾ ಖಾಸಗಿಕರಣಕ್ಕೆ ದೂಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ರಾಜ್ಯದಲ್ಲಿ ಜನರು ತೀವ್ರ ಬೆಲೆ ಏರಿಕೆ, ಶಿಕ್ಷಣ- ಆರೋಗ್ಯ ಕ್ಷೇತ್ರದ ಖಾಸಗೀಕರಣದಿಂದಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಲು, ವಿದ್ಯುತ್, ಸಾರಿಗೆ ದರಗಳನ್ನು ಏರಿಸಿ ಜನರಿಗೆ ಬರೆ ಎಳೆದಿದೆ. ಈ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಬಡಜನಗಳ ಬಗ್ಗೆ ಕಾಳಜಿ ಇದೆಯೇ? ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷಗಳಲ್ಲಿ ಅಧಿಕಾರಕ್ಕಾಗಿ, ಕುರ್ಚಿಗಾಗಿ ವೈಯಕ್ತಿಕ ನಿಂದನೆ, ಒಳ ಜಗಳಗಳಲ್ಲಿ ಮುಳುಗಿ ಹೋಗಿರುವುದು ಜನಗಳಿಗೆ ಹೇಸಿಗೆ ಹುಟ್ಟಿಸುತ್ತಿದೆ. ಭ್ರಷ್ಟ, ಜನ ವಿರೋಧಿ ಬಿಜೆಪಿ ಸರ್ಕಾರದ ಬಗೆಗಿನ ಜನ ವಿರೋಧಿ ಅಲೆಯ ಲಾಭ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಈಗ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಜನಗಳ ಸಮಸ್ಯೆಗಳಿಗೆ ಧ್ವನಿ ಯಾಗುವ ಬದಲು ವೈಯಕ್ತಿಕ ನಿಂದನೆ ಹಾಗೂ ಅಧಿಕಾರದ ಕೆಸರೆರಚಾಟದಲ್ಲಿ ಮುಳುಗಿವೆ. ಒಟ್ಟಾರೆ ಯಾವ ಪಕ್ಷಗಳಿಗೂ ಜನರ ನೈಜ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ ಮತ್ತು ಹೋರಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷವು ನಿರಂತರವಾಗಿ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟಗಳನ್ನು ಕಟ್ಟುತ್ತಿದೆ. ಅದರ ಭಾಗವಾಗಿ ಈ ಹೋರಾಟ ನಡೆಯುತ್ತಿದೆ. ಮುಂದೆಯೂ ಆರೋಗ್ಯ ಕ್ಷೇತ್ರದ ಸಮಸ್ಯೆಗಳು ಸೇರಿದಂತೆ ಎಲ್ಲಾ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದಾದ್ಯಂತ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಈ ಬಂಡ ಸರ್ಕಾರಗಳ ಪೊಳ್ಳು ಭರವಸೆಗಳಿಗೆ ಮೋಸ ಹೋಗದೆ, ಎಲ್ಲಾ ವಿಭಾಗದ ಜನಗಳನ್ನು ಒಳಗೊಂಡು ಒಗ್ಗಟ್ಟಾಗಿ ಹಳ್ಳಿಗಳಲ್ಲಿ, ಬಡಾವಣೆಗಳಲ್ಲಿ ಜನ ಸಮಿತಿಗಳನ್ನು ರಚಿಸಿಕೊಂಡು ಆ ಮೂಲಕ ಬಲಿಷ್ಠ ಜನಾಂದೋಲನಕ್ಕೆ ಜನರು ಸಜ್ಜಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯರಾದ ಮಧುಲತಾ ಗೌಡರ್ ಮಾತನಾಡಿ, ಧಾರವಾಡ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ. PHC ಗಳಿಂದ ಹಿಡಿದು KIMS ವರೆಗೂ ಸಾಕಷ್ಟು ಸಮಸ್ಯೆಗಳಿವೆ. ಅವಶ್ಯಕತೆ ಇರುವಷ್ಟು ನುರಿತ ವೈದ್ಯರ, ದಾದಿಯರ, ಮತ್ತಿತರ ವೈದ್ಯಕೀಯ ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಯಿದೆ. BPL ಕಾರ್ಡ್‌ದಾರರಿಗೆ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಸರ್ಜರಿ ಸೇರಿದಂತೆ ಇತರೆ ಉಚಿತ ತಪಾಸಣೆಗಳಿಗೆ ಇದ್ದ ಅವಕಾಶಕ್ಕೂ ಇದೀಗ ಕತ್ತರಿ ಬಿದ್ದಿದೆ. ಸರ್ಕಾರದ ನೀತಿಯಂತೆ ಆರ್ಥಿಕ ಸಂಕಷ್ಟದ ನೆಪವೊಡ್ಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಬಡರೋಗಿಗಳಿಂದ ಚೀಟಿ, ತಪಾಸಣೆ, ಸ್ಕ್ಯಾನಿಂಗ್, ಸರ್ಜರಿ ಪ್ರತಿಯೊಂದಕ್ಕೂ ಹಣ ವಸೂಲಿ ಮಾಡುತ್ತಿದ್ದಾರೆ. ಇನ್ನೊಂದೆಡೆ ಚೀಟಿ, ಔಷಧಿ ಮತ್ತು ಹಣ ಪಾವತಿ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ದಿನವಿಡಿ ನೂರಾರು ರೋಗಿಗಳು ಪಾಳಿಯಲ್ಲಿ ನಿಲ್ಲುವ ಪರಿಸ್ಥಿತಿಯಿದೆ. ಬಡರೋಗಿಗಳು ತಮ್ಮ ದಿನಗೂಲಿ ಬಿಟ್ಟು ಸಣ್ಣಪುಟ್ಟ ರೋಗಗಳಿಗೂ ವಾರಗಟ್ಟಲೆ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಆಸ್ಪತ್ರೆಯ ಔಷಧಾಲಯಗಳಲ್ಲಿ ಉತ್ತಮ ಗುಣಮಟ್ಟದ ಔಷಧಿ ಪೂರೈಕೆಯಾಗುತ್ತಿಲ್ಲ. ಬದಲಾಗಿ ವೈದ್ಯರು ಹೊರಗಿನ ಮೆಡಿಕಲ್ ಔಷಧಿ ಸೂಚಿಸುತ್ತಾರೆ. ಅವುಗಳನ್ನು ಕೊಳ್ಳುವ ಶಕ್ತಿ ಬಡವರಿಗಿದೆಯೇ? ಪರಿಣಾಮವಾಗಿ ಆರೋಗ್ಯ ರಕ್ಷಣೆಗೆ ಬರುವ ರೋಗಿಗಳು ಮತ್ತಷ್ಟು ಅನಾರೋಗ್ಯ ಪೀಡಿತರಾಗುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಅಧ್ಯಕ್ಷತೆ ವಹಿಸಿದ್ದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ ಮಾತನಾಡಿ ನಮ್ಮ ಪಕ್ಷವು ರಾಜ್ಯದಾದ್ಯಂತ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಆಗ್ರಹಿಸಿ, ಆರೋಗ್ಯ ಕ್ಷೇತ್ರದ ಖಾಸಗೀಕರಣ ಖಂಡಿಸಿ ಹೋರಾಟಗಳನ್ನು ಕೈಗೊಂಡಿದ್ದು ಅದರ ಭಾಗವಾಗಿ ಧಾರವಾಡ ಜಿಲ್ಲೆಯಲ್ಲಿ ಹೋರಾಟವನ್ನು ಕೈಗೆತ್ತಿಕೊಂಡಿದೆ. ಜಿಲ್ಲಾಡಳಿತ, ಸರ್ಕಾರಿ ಆಸ್ಪತ್ರೆಗಳ ಸಮಸ್ಯೆಗಳನ್ನು ಕೂಡಲೇ ಸರ್ಕಾರ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ, ಭುವನ ಬಳ್ಳಾರಿ, ದೀಪಾ ಧಾರವಾಡ, ಶರಣುಬಸವ ಗೋನವಾರ, ಭವಾನಿಶಂಕರ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಗಂಗೂಬಾಯಿ ಕೊಕರೆ, ಹನುಮೇಶ ಹುಡೇದ್, ರಣಜಿತ್ ದೂಪದ್, ಶಶಿಕಲಾ ಮೇಟಿ, ಪ್ರೀತಿ ಸಿಂಗಾಡಿ ಸೇರಿದಂತೆ ಪಕ್ಷದ ಸದಸ್ಯರು, ಕಾರ್ಯಕರ್ತರು, ನಾಗರಿಕರು ಪ್ರತಿಭಟನೆ ಭಾಗವಹಿಸಿದ್ದರು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!