ರಾಷ್ಟ್ರೀಯ ಮತದಾರರ ದಿನಾಚರಣೆ ಮತದಾರರ ಜಾಗೃತಿಯಿಂದ ಪ್ರಜಾಪ್ರಭುತ್ವ ಉಳಿಯುತ್ತದೆ; ಪ್ರತಿಯೊಬ್ಬ, ಪ್ರಬುದ್ಧ ಮತದಾರರಿಂದ ಸ್ಥಿರ ಸರಕಾರ, ಅಭಿವೃದ್ಧಿಪರ ಆಡಳಿತ ಬರಲು ಸಾಧ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಜ.25: ಚುನಾವಣಾ ಕಾರ್ಯಗಳ ಜವಾಬ್ದರಿ ಹೊತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪ್ರಾಮಾಣಿಕತೆ, ಪಾರ್ದರ್ಶಕತೆ ಮತ್ತು ನಿಷ್ಠೆಯಿಂದ ಮಾಡಿದರೆ ಮಾತ್ರ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಜರುಗುತ್ತವೆ. ಅಂತಹ ಸಮರ್ಥ ಅಧಿಕಾರಿ, ಸಿಬ್ಬಂದಿಗಳನ್ನು ನಮ್ಮ ದೇಶ ಹೊಂದಿರುವದರಿಂದ ಪ್ರತಿ ಚುನಾವಣೆಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದಿಂದ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಮಾತನಾಡಿದರು.

ರಾಷ್ಟ್ರೀಯ ಮತದಾರ ದಿನಾಚರಣೆ ಸಂದರ್ಭದಲ್ಲಿ ಚುನಾವಣಾಕಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಿಬ್ಬಂದಿ, ಅಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ, ಗೌರವಿಸಲಾಗುತ್ತದೆ. ಈ ಮೂಲಕ ಅವರ ಸೇವೆಯನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತದೆ ಎಂದು ಅವರು ಹೇಳಿದರು.

ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸುವ ಅವಕಾಶವನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ನಾವು ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಬೇಕು. 17 ವರ್ಷ ತುಂಬಿದ ಪ್ರತಿ ಯುವಕ, ಯುವತಿ ಮತದಾರ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅವರಿಗೆ 18 ವರ್ಷ ತುಂಬಿದ ತಕ್ಷಣ ಅದು ಮತದಾರಪಟ್ಟಿಗೆ ಸೆರ್ಪಡೆ ಆಗುತ್ತದೆ ಮತ್ತು ಮತದಾನ ಮಾಡುವ ಹಕ್ಕು ಲಭಿಸುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಭಾರತದಲ್ಲಿ‌ 99 ಕೋಟಿ ಮತದಾರರಿದ್ದಾರೆ. ವಿಶ್ವದಲ್ಲಿಯೇ ಬಲಿಷ್ಠ ಮತ್ತು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಯುವ ಮತದಾರರನ್ನು ಸೆಳೆಯಲು, ಭಾರತ ಚುನಾವಣಾ ಆಯೋಗ ಆ್ಯಪ್ ಬಿಡುಗಡೆ ಮಾಡಿದೆ. ತಮ್ಮ ಆ್ಯಂಡ್ರೈಡ್ ಮೊಬೈಲ್ ಮೂಲಕ ವಿಎಚ್ಐ ಆ್ಯಪ್ ಬಳಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಎಫ್.ದೊಡ್ಡಮನಿ ಅವರು ಮಾತನಾಡಿ, ಇಂದಿನ ಸರಕಾರಗಳು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತವೆ. ಜನಾಧಿಕಾರ ನೀಡಿದ ವ್ಯವಸ್ಥೆಗೆ ಪೂರಕವಾಗಿ ಚುನಾವಣಾ ವ್ಯವಸ್ಥೆ ಕೆಲಸ ಮಾಡುತ್ತಿದೆ. ಜನರ ಹಿತರಕ್ಷಣೆಗೆ ಬದ್ಧವಾಗಿ ಸರಕಾರಗಳು ನಡೆಯುತ್ತವೆ. ನಾವೇ ಆರಿಸಿದ ಜನಪ್ರತಿನಿಧಿಗಳು ನಮ್ಮನ್ಬು ಪ್ರತಿನಿಧಿಸುತ್ತವೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಉತ್ತಮ ವ್ಯಕ್ತಿಗಳನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು. ರಾಷ್ಟ್ರೀಯ ಮತದಾನ ದಿನ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮಗಳು ಹೆಚ್ಚುಹೆಚ್ಚು ಸಙಘಟಿಸಬೇಕು ಎಂದು ಅವರು ತಿಳಿಸಿದರು.
ಭಾರತ ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವದರಿಂದ ಭಾರತದಲ್ಲಿ ಚುನಾವಣೆಗಳು ಕಾನೂನುಬದ್ದವಾಗಿ, ನಿಯಮಾನುಸಾರ ನಡೆಯುತ್ತಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೊಡ್ಡಮನಿ ಅವರು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಪ್ರತಿ ಮತಕ್ಕೆ ತನ್ನದೆಯಾದ ಮೌಲ್ಯ, ಮಹತ್ವವಿದೆ. ಚುನಾವಣೆಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೋಳ್ಳಬೇಕು. 18 ವರ್ಷ ತುಂಬಿದ ಎಲ್ಲ ಯುವಕ,ಯುವತಿಯರು ಮತದಾರ ಯಾದಿಗೆ ನೋಂದಣಿ ಆಗಬೇಕು ಎಂದು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಎ.ಚನ್ನಪ್ಪ ಅವರು ಮಾತನಾಡಿ, ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಸಂಸದೀಯ ವ್ಯವಸ್ಥೆ ಗಟ್ಟಿಗೊಳಿಸಲು ಪ್ರತಿ ಮತದಾರನು ಚುನಾವಣೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಚುನಾವಣಾ ರಾಯಬಾರಿಗಳಾದ ಅಂತರಾಷ್ಟ್ರೀಯ ಪ್ಯಾರಾ ರೈಪಲ್ ಶೂಟರ್ ಜ್ಯೋತಿ ಸಣ್ಣಕ್ಕಿ ಅವರು ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ವಿಕಲಚೇತನರಿಗೆ ಸಾಕಷ್ಟು ಅನಕೂಲ ಮಾಡಲಾಗಿದೆ. ಮನೆಯಿಂದ ಮತದಾನ, ವ್ಹಿಲ್ ಚೇರ, ರ್ಯಾಂಪ್ ಸೌಲಭ್ಯ ಮಾಡಲಾಗಿದೆ. ಪ್ರತಿ ಚುನಾವಣೆಗಳಲ್ಲಿ ಶೇ. ನೂರರಷ್ಟು ಮತದಾನ ಮಾಡಿ ಎಲ್ಲ ಚುನಾವಣೆಗಳನ್ನು ಯಶಸ್ವಗೊಳಿಸೋಣ ಎಂದರು.

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಜಿಲ್ಲಾ ಚುನಾವಣಾ ರಾಯಬಾರಿಗಳಾದ ಅಂತರಾಷ್ಟ್ರೀಯ ಪ್ಯಾರಾ ರೈಪಲ್ ಶೂಟರ್ ರಾಕೇಶ ನಿಡಗುಂದಿ ಅವರು ವೇದಿಕೆಯಲ್ಲಿ ಇದ್ದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಸಭಿಕರಿಗೆ
ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು.
ಅಪರ ಜಿಲ್ಲಾಧಿಕಾರಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್.ಬಿ.ಕಣವಿ ನಾಡಗೀತೆ ಪ್ರಸ್ತುಪಡಿಸಿದರು. ಧಾರವಾಡ ತಹಶಿಲ್ದಾರ ಡಾ.ಡಿ.ಎಚ್.ಹೂಗಾರ ವಂದಿಸಿದರು. ಕೆ.ಎಂ.ಶೇಖ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಚುನಾವಣಾ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.

ಬೆಸ್ಟ್ ಬಿಎಲ್ಓ: ಜಿಲ್ಲಾ ಮಟ್ಟದ ಬಿಎಲ್ಓ ಮೇಲ್ವಿಚಾರಕರಾಗಿ ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ ಮತ್ತು ಉತ್ತಮ ಬಿಎಲ್ಓ ಆಗಿ ಅಂಗನವಾಡಿ ಕಾರ್ಯಕರ್ತೆ ಸವಿತಾ ಶೀಲವಂತರ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಧಾರವಾಡ 71 ವಿಧಾನಸಭಾ ಮತಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಮೇಲ್ವಿಚಾರಕರಾದ ಆನಂದ ಆನಿಕಿವಿ, ಸಾವಿತ್ರಿ ಡೊಣ್ಣಿ, ಮಂಜುನಾಥ ಬಾಗೇವಾಡಿ ಅವರನ್ನು ಹಾಗೂ ಉತ್ತಮ ಬಿಎಲ್ಓ ಗಳಾದ ಶೃತಿ ಕಡ್ಲಿಮಠ, ವಿಜಯಾ ನದಗಂಟಿ ಮತ್ತು ಗೌರವ್ವ ಚರಂತಿಮಠ ಅವರನ್ನು ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಜಿಲ್ಲೆಯ 18 ವರ್ಷದ ತುಂಬಿದ ನವ ಮತದಾರ ಪರವಾಗಿ ಸಾಂಕೇತಿಕವಾಗಿ ಸುನೀಲ ಬಸರಿಗಟ್ಟಿ ಮತ್ತು ಪ್ರೀತಿ ಪಟ್ಟಣಶಟ್ಟಿ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಮತದಾರ ಗುರುತಿನ ಚೀಟಿ ವಿತರಿಸಿದರು. ಉತ್ತಮ ಸಾಕ್ಷರತಾ ಕ್ಲಬ್ ಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

  • Related Posts

    ಮಾರುಕಟ್ಟೆಯ ಹಮಾಲರ ಸಂಘದಿಂದ ಮುರುಘಮಠಕ್ಕೆ ಕ್ವೀಂಟಲ್ ಬೆಲ್ಲ ಪ್ರಸಾದ

    ಶ್ರೀ ಮಧತನಿ ಮುರುಗೇಂದ್ರ ಮಹಾಶಿವಯೋಗಿಗಳ ಜಾತ್ರಾಮಹೋತ್ಸವದ ಅಂಗವಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದಿಂದ, ಹಣ್ಣೊಂದು ಕ್ವೀಂಟಲ್ ಬೆಲ್ಲವನ್ನು ಪ್ರಸಾದಕ್ಕೆ ನೀಡಿದರು. ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮುಖಾಂತರ ಎ ಪಿ ಎಮ್ ಸಿ ಇಂದ ಶ್ರೀ ಮುರುಘಮಠಕ್ಕೆ ನೀಡಿದರು. ಈ ಸಂದರ್ಭದಲ್ಲಿ…

    ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆ

    ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ…

    RSS
    Follow by Email
    Telegram
    WhatsApp
    URL has been copied successfully!