ಧಾರವಾಡ : ಸಮಾಜದಲ್ಲಿ ಧರ್ಮನಿಷ್ಠ, ಸಂಸ್ಕಾರ ಆಚಾರವಂತರನ್ನು ಬೆಳೆಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಜಂಗಮರು ಶ್ರಮಿಸಬೇಕೆಂದು ಸುಳ್ಳ ಗ್ರಾಮದ ಪಂಚಗ್ರಹ ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಧಾರವಾಡ ನಗರದ ಗುರುಭವನದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕ ಜಂಗಮರಿಗೆ ಮತ್ತು ಕ.ರಾ.ಸ.ನೌ.ಸಂಘದ ಧಾರವಾಡ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ನೂತನವಾಗಿ ಆಯ್ಕೆ ಆಗಿರುವ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಗೌರವ ಅರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು.
ಸಂಸ್ಕಾರವಂತ ಸಮಾಜ ಇಂದಿನ ಜಗತ್ತಿಗೆ ಅತೀ ಅವಶ್ಯವಾಗಿದೆ. ಸತ್ ಬೋಧನೆ, ಧರ್ಮ ಪ್ರಸಾರ, ಆಚಾರ-ವಿಚಾರಗಳನ್ನು ಪ್ರಚುರು ಪಡಿಸುವುದು ಜಂಗಮ ಸಮಾಜದ ಧರ್ಮ. ಪುರದ ಹಿತವನ್ನು ಬಯದುವ ಪುರೋಹಿತರ ಆದಿಯಾಗಿ ಎಲ್ಲ ಜಂಗಮರು ಆಚಾರ, ವಿಚಾರಗಳಲ್ಲಿ ಶ್ರೇಷ್ಠರಾಗಿ ಬದುಕುವ ಮೂಲಕ ಸುಸಂಸ್ಕೃತ ಸಮಾಜ ರೂಪಿಸಬೇಕು ಎಂದು ತಿಳಿಸಿದರು.
ಅನೇಕ ಕ್ಷೇತ್ರಗಳಲ್ಲಿ ವಿಶೇಷ ಮತ್ತು ಅಗಾಧ ಸಾಧನೆ ಮಾಡಿದ ಜಂಗಮ ಮಹನೀಯರಿದ್ದಾರೆ. ಅವರನ್ನು ಗುರುತಿಸಿ, ಗೌರವಿಸಬೇಕು. ಅವರ ಅನುಭವದ ಮಾರ್ಗದರ್ಶನ ಪಡೆಯಬೇಕು ಎಂದರು.
ತಮಗೆ ಬಂದಿರುವ ಅಧಿಕಾರ, ಹುದ್ದೆಗಳನ್ನು ಬಳಸಿಕೊಂಡು ನಿಸ್ವಾರ್ಥದಿಂದ ಪ್ರಾಮಾಣಿಕ ಸೇವೆ ಸಲ್ಲಿಸಬೇಕು. ಯಾವುದೇ ತಾರತಮ್ಯ ಮಾಡದೇ ಸಕಲರ ಹಿತವನ್ನು ಬಯಸಿ, ಸಹಾಯ ಮಾಡಿ ಎಂದು ನೂತನ ಸದಸ್ಯರಿಗೆ ಪೂಜ್ಯರು ಉಪದೇಶಿಸಿದರು.
ಪಂಚಪೀಠಗಳು, ಶಾಖಾ ಮಠಗಳು ಪರಂಪರಾಗತವಾಗಿ ಸಮಾಜದ ಏಳಿಗೆಗೆ ಮಾರ್ಗದರ್ಶನ ಮಾಡುತ್ತಿವೆ. ನೂತನ ನಿರ್ದೇಶಕರು ಉತ್ತಮ ನಿರ್ಧಾರ, ನಡವಳಿಕೆಗಳಿಂದ ಇತರರಿಗೆ ಮಾದರಿ ಆಗಬೇಕು. ವಿಭೂತಿ, ಇಷ್ಟಲಿಂಗ ಧಾರಣೆ ಮಾಡಬೇಕು. ಧರ್ಮ, ಜಾತಿಗಳನ್ನು ಮೀರಿ ಬೆಳೆಯಬೇಕು. ವೀರಶೈವ ಧರ್ಮ ವಿಶ್ವ ಧರ್ಮವಾಗಿದ್ದು, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದನ್ನು ಪ್ರಸಾರ ಮಾಡಬೇಕು ಎಂದು ಪೂಜ್ಯರು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಮೃತ್ಯುಂಜಯ ಎಸ್.ಕೋರಿಮಠ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಷ.ಬ್ರ. ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ನೂತನ ನಿರ್ದೇಶಕರಿಗೆ ಹಾಗೂ ಸಭೆಯಲ್ಲಿದ್ದವರಿಗೆ ಸೇವಾ ಪ್ರತಿಜ್ಞೆ ಬೋಧಿಸಿದರು.
ಕಾರ್ಯಕ್ರಮದಲ್ಲಿ ನೂತನ ನಿರ್ದೇಶಕರಾದ ಎನ್.ವಿ.ಕುರವತ್ತಿಮಠ, ಪರಮಾನಂದ ಶಿವಳ್ಳಿಮಠ, ಕಲಘಟಗಿ ತಾಲೂಕು ಘಟಕದ ಅಧ್ಯಕ್ಷ ಜಗದೀಶ ವಿರಕ್ತಮಠ, ಚಂದ್ರಶೇಖರ ಸಿಂದಗಿಮಠ ಮತ್ತು ಸಾಧಕರಾದ ಬಸವರಾಜ ಚಿಕ್ಕಮಠ, ಬಸವರಾಜ ಮಠದ, ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ನೂತನ ಸದಸ್ಯ ಬಸವರಾಜ ಕುಂದಗೋಳಮಠ, ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ಹಾಗೂ ಇತರರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೆಸಿಡಿ ನಿವೃತ್ತ ಪ್ರಾಚಾರ್ಯ ಡಾ.ಎಸ್.ಜಿ.ಮಠದ ಕವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಗದೀಶ ಕಾಡದೇವರಮಠ, ಎಬಲ್ ಮ್ಯಾನ್ಯುಪೆಕ್ಚರಿಂಗ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಹಿರೇಮಠ, ಖಜಾನೆ ಇಲಾಖೆ ಅಧಿಕಾರಿ ವರ್ಷಾ ಮಠದ ಸರಕಾರಿ ನೌಕರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಶಂಕ್ರಯ್ಯ ಸುಬ್ಬಾಪುರಮಠ, ನಾಗಭೂಷಣ ಪಟ್ಟೆದ ಡಾ.ಸದಾನಂದ ಹಿರೇಮಠ, ಗಂಗಾಧರ ಐ.ಹಿರೇಮಠ, ಶಾಂತಯ್ಯ ಎನ್.ಹಿರೇಮಠ, ಶರಣಬಸಯ್ಯ ಕುರ್ತಕೋಟಿ, ನಾಗಯ್ಯ ಮೂಕಶಿವಯ್ಯನವರ ಸೇರಿದಂತೆ ಇತರರು ವೇದಿಕೆಯಲ್ಲಿ ಇದ್ದರು.
ಹಿರಿಯ ಶಿಕ್ಷಕರಾದ ಸಿ.ಸಿ.ಹಿರೇಮಠ ಅವರು ಪ್ರಾರ್ಥಿಸಿದರು. ಪ್ರೊ. ಜಗದೀಶ ಕಾಡದೇವರಮಠ ಅವರು ಸ್ವಾಗತಿಸಿದರು. ಡಾ.ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭು ಕೆಂಡದಮಠ ವಂದಿಸಿದರು. ಸಿದ್ದು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯಿಂದ ಧೀಮಂತ, ಸಾಧಕ ಮತ್ತು ಬಾಲ ಪ್ರೋತ್ಸಾಹ ಪ್ರಶಸ್ತಿ ಪುರಸ್ಕೃತರಾದ ಏಳು ಜನ ಜಂಗಮ ಸಾಧಕರಿಗೆ ಹಾಗೂ 2024-29 ನೇ ಸಾಲಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ನೂತನವಾಗಿ ಆಯ್ಕೆ ಆಗಿರುವ 20 ಜನ ಜಂಗಮ ಸಮಾಜದ ನಿರ್ದೇಶಕರಿಗೆ ಕಾರ್ಯಕ್ರಮದಲ್ಲಿ ಗೌರವಿಸಿ ಸತ್ಕರಿಸಲಾಯಿತು.
ಜಂಗಮ ಸಂಸ್ಥೆಯ ನಿರ್ದೇಶಕರು, ಸದಸ್ಯರು ಮತ್ತು ಹುಬ್ಬಳ್ಳಿ-ಧಾರವಾಡ ಜಂಗಮ ಸಮಾಜದ ಸದಸ್ಯರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.