
ಧಾರವಾಡ 15 : ಇಲ್ಲಿನ ಪರ್ವಿನ್ ಬೇಗಂ ಸ್ಮೃತಿ ಟ್ರಸ್ಟ್ ವತಿಯಿಂದ ಪರ್ವಿನ್ ಬೇಗಂ, ಉಸ್ತಾದ್ ಅಬ್ದುಲ್ ಖಾದರ್ ಖಾನ್ ಹಾಗೂ ಪಂ.ಬಸವರಾಜ ಬೆಂಡಿಗೇರಿ ಸ್ಮರಣಾರ್ಥ ಫೆಬ್ರುವರಿ 16 ರಂದು ಸಂಜೆ 5.30ಕ್ಕೆ ನಗರದ ಸೃಜನಾ ರಂಗಮಂದಿರದಲ್ಲಿ
ಸಂಗೀತ ಕಾರ್ಯಕ್ರಮ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಉಸ್ತಾದ್ ಫಯಾಜ್ ಖಾನ್ ತಿಳಿಸಿದರು.
ಭಾರ್ಗವ ಕುಲಕರ್ಣಿ ಅವರಿಂದ ಶಾಸ್ತ್ರೀಯ ಗಾಯನವಿದ್ದು, ಶ್ರೀಹರಿ ದಿಗ್ಗಾವಿ ಹಾಗೂ ಸಫ್೯ರಾಜ್ ಖಾನ್ ಸಾಥ ನೀಡುವರು
ನಂತರ ಉಸ್ತಾದ್ ದಿಲ್ ಶಾದ್ ಖಾನ್ ಅವರಿಂದ ಸಾರಂಗಿ ವಾದನವಿದ್ದು, ಇವರಿಗೆ ಪಂ.ರವೀಂದ್ರ ಯಾವಗಲ್ ತಬಲಾ ಸಾಥ್ ನೀಡುವರು. ಆಮೇಲೆ ಪಂ.ಧನಂಜಯ ಹೆಗಡೆ ಅವರ ಶಾಸ್ತ್ರೀಯ ಗಾಯನವಿದ್ದು, ಇವರಿಗೆ ಉಸ್ತಾದ್ ನಿಸಾರ್ ಅಹ್ಮದ್ ಹಾಗೂ ಸಫ್೯ರಾಜ್ ಖಾನ್ ಸಾಥ್ ನೀಡುವರು ಎಂದು ಪರ್ವಿನ್ ಬೇಗಂ ಟ್ರಸ್ಟಿನ ರೂವಾರಿಯಾಗಿರುವ ಫಯಾಜ್ ಖಾನ್ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಅಂದು ಪತ್ರಕರ್ತ ಗಣೇಶ ಅಮೀನಗಡ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ಸಿ.ಬಿ.ಚಿಲ್ಕರಾಗಿ ಅವರು ರಚಿಸಿದ ಉಸ್ತಾದ್ ಫಯಾಜ್ ಖಾನ್ ಅವರ ಜೀವನಕಥನ ‘ಸಾರಂಗಿ ನಾದದ ಬೆನ್ನೇರಿ ಕೃತಿ ಬಿಡುಗಡೆಯಾಗಲಿದೆ ಎಂದರು.
ಅಂದಿನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಗೌರವಾನ್ವಿತ ಅತಿಥಿಗಳಾಗಿ ವಯಲಿನ್ ವಾದಕರಾದ ಪಂ.ಬಿ.ಎಸ್.ಮಠ, ಧಾರವಾಡ ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಸೌಭಾಗ್ಯ ಕುಲಕರ್ಣಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶ ಅಮೀನಗಡ, ಸಫ್೯ರಾಜ್ ಖಾನ್ ಇದ್ದರು.